ಬೆಂಗಳೂರು,ಮಾ.13- ಹಿಂದುಳಿದ ಆಯೋಗದ ವತಿಯಿಂದ ನಡೆಸಲಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಶೀಘ್ರವೇ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.
ಶಾಸಕ ಪೂಜಾರ್ ಅವರ ಪರವಾಗಿ ಶಾಸಕ ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ. ಆ ವರದಿ ದೊರೆತ ನಂತರ ಯಾವ ಸಮುದಾಯದ ಜನರು ಎಷ್ಟು ಜನಸಂಖ್ಯೆ ಹೊಂದಿದ್ದಾರೆ ಎಂಬುದು ಗೊತ್ತಾಗಲಿದೆ. ಆನಂತರ ಆಯಾ ಸಮುದಾಯದ ಜನಸಂಖ್ಯೆ ಆಧಾರದ ಮೇಲೆ ವಿಶೇಷ ಸವಲತ್ತುಗಳನ್ನು ಕೊಡಲಾಗುವುದು ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಮುಂದಿನ ದಿನಗಳಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ರಾಜೀವ್ ಗಾಂಧಿ ವಸತಿ ನಿಗಮದಡಿ ಮನೆ ನಿರ್ಮಿಸಲು ಅವಕಾಶವಿದೆ. ತುಮಕೂರು, ಕೊಪ್ಪಳ, ಚಿತ್ರದುರ್ಗ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಒಂದೊಂದು ಹಳ್ಳಿಯಲ್ಲಿ ಅಲೆಮಾರಿಗಳಿಗೆ ಮನೆ ನಿರ್ಮಿಸಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹೊಲಿಗೆ ಯಂತ್ರ : ಡಾ.ಯತೀಂದ್ರ ಅವರ ಪರವಾಗಿ ಶಾಸಕ ಐವಾನ್ ಡಿಸೋಜ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ತಂಗಡಗಿ ಅವರು, 28 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಅಷ್ಟೂ ಮಂದಿಗೆ ಹೊಲಿಗೆ ಯಂತ್ರವನ್ನು ನೀಡಬೇಕು ಎಂದರು.
2025-26 ನೇ ಸಾಲಿನಲ್ಲಿ ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ವತಿಯಿಂದ 21,562 ಹಾಗೂ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ವತಿಯಿಂದ 2307 ಅರ್ಜಿಗಳು ಸ್ವೀಕಾರವಾಗಿವೆ ಎಂದು ಹೇಳಿದರು.
2023-24ನೇ ಸಾಲಿನಲ್ಲಿ ಕ್ರಿಯಾ ಯೋಜನೆ ಮಾಡದ ಹಿನ್ನೆಲೆಯಲ್ಲಿ ಹೊಲಿಗೆ ಯಂತ್ರ ಕೊಟ್ಟಿಲ್ಲ. ಈಗಾಗಲೇ ಹೊಲಿಗೆ ಯಂತ್ರಗಳ್ನು ಫಲಾನುಭವಿಗಳಿಗೆ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಫಲಾನುಭವಿಗಳ ಆಯ್ಕೆ ಪಟ್ಟಿ ನೀಡುವುದು ತಡವಾಗಿರುವ ಹಿನ್ನೆಲೆಯಲ್ಲಿ ಹೊಲಿಗೆ ಯಂತ್ರ ನೀಡುವುದು ವಿಳಂಬವಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರವೇ ಹೊಲಿಗೆ ಯಂತ್ರಗಳನ್ನು ನೀಡಲಾಗುವುದು ಎಂದರು.
ವಿದ್ಯಾರ್ಥಿನಿಲಯ ಮಂಜೂರು :
ಬೀದರ್ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 38 ಮೆಟ್ರಿಕ್ ಪೂರ್ವ ಹಾಗೂ 40 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಶಾಸಕ ಎಂ.ಜಿ.ಮುಳೆ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
2026-27ನೇ ಸಾಲಿನಲ್ಲಿ ಬೀದರ್ ಜಿಲ್ಲೆಗೆ 100 ಸಂಖ್ಯಾಬಲದ ಒಂದು ಬಾಲಕರ ಹಾಗೂ ಒಂದು ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು.
