Saturday, May 2, 2026
Homeರಾಜ್ಯಅಧಿವೇಶನದ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿಗೆ, ಸಂಪುಟ ಸರ್ಜರಿ ಚರ್ಚೆ ಸಾಧ್ಯತೆ

ಅಧಿವೇಶನದ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿಗೆ, ಸಂಪುಟ ಸರ್ಜರಿ ಚರ್ಚೆ ಸಾಧ್ಯತೆ

CM Siddaramaiah to visit Delhi after the session, likely to discuss cabinet reshuffle

ಬೆಂಗಳೂರು, ಮಾ.15- ವಿಧಾನ ಮಂಡಲದ ಅಧಿವೇಶನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದು, ಸಚಿವ ಸಂಪುಟ ಪುನರ್‌ರಚನೆ ಕುರಿತು ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಸಾಂಪ್ರದಾಯಿಕವಾಗಿ ಬಜೆಟ್‌ ಮಂಡನೆ ಅಥವಾ ಅದರ ಅಂಗೀಕಾರದ ಬಳಿಕ ಹಣಕಾಸು ಸಚಿವರು, ದೆಹಲಿಗೆ ಭೇಟಿ ನೀಡಿ ಹೈಕಮಾಂಡ್‌ನ ನಾಯಕರಿಗೆ ಬಜೆಟ್‌ನಲ್ಲಿರುವ ಅಂಶಗಳ ಕುರಿತು ಮಾಹಿತಿ ನೀಡಿ ಬರುವುದು ವಾಡಿಕೆ. ಆದರೆ ಪ್ರಸ್ತುತ ಸಿದ್ದರಾಮಯ್ಯ ಅವರಿಗೆ ಸಮಯಾವಕಾಶದ ಅಭಾವದಿಂದಾಗಿ ದೆಹಲಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಅಧಿವೇಶನದ ಬಳಿಕ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಮಾರು 12ಕ್ಕೂ ಹೆಚ್ಚು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಸಂಪುಟ ಪುನರ್‌ರಚಿಸುವ ಇರಾದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ. ಆದರೆ ಇದಕ್ಕೆ ಡಿ.ಕೆ.ಶಿವಕುಮಾರ್‌ ಅಡ್ಡಗಾಲಾಗಿದ್ದು ನಾಯಕತ್ವ ವಿಷಯ ಇತ್ಯರ್ಥಗೊಳ್ಳದವರೆಗೂ ಸಂಪುಟ ಪುನರ್‌ರಚನೆಯಾಗುವುದು ಬೇಡ ಎಂದು ಪಟ್ಟು ಹಿಡಿದಿದ್ದಾರೆ.

ಇದಕ್ಕೆ ಪ್ರತಿತಂತ್ರವಾಗಿ ಸಿದ್ದರಾಮಯ್ಯ ಬಣ, ಹಿರಿಯ ಶಾಸಕರನ್ನು ಬಳಸಿಕೊಳ್ಳಲಾರಂಭಿಸಿದೆ. ಕಾಂಗ್ರೆಸ್‌‍ನಲ್ಲಿಯೇ ಹಿರಿಯ ಶಾಸಕರ ಒಂದು ಬಣ ಸಭೆ ನಡೆಸಿ, ಸಂಪುಟ ಪುನರ್‌ರಚನೆ ಮಾಡುವಂತೆ ಒತ್ತಡ ಹೇರಿದೆ. ತಮಗೂ ಸಂಪುಟದಲ್ಲಿ ಅವಕಾಶ ನೀಡಬೇಕು. ಮೂರಕ್ಕಿಂತಲೂ ಹೆಚ್ಚು ಬಾರಿ ಗೆದ್ದಿರುವ ಶಾಸಕರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ನಾಯಕತ್ವದ ಬದಲಾವಣೆಯ ಗೊಂದಲದಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಸಂಪುಟ ಪುನರ್‌ರಚನೆಗೆ ಕೈ ಹಾಕಿದ್ದಾರೆ. ಒಮೆ ಸಂಪುಟ ಪುನರ್‌ರಚನೆಯಾದರೆ, ಮುಂದಿನ ಅವಧಿಗೆ ನಾಯಕತ್ವದ ಗೊಂದಲಗಳು ಚರ್ಚೆಯಾಗುವುದಿಲ್ಲ. ಈ ಕಾರಣಕ್ಕೆ ಹಿರಿಯ ಶಾಸಕರನ್ನು ಬಿಟ್ಟು ಸಿದ್ದರಾಮಯ್ಯ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.

ಬಜೆಟ್‌ ಅಧಿವೇಶನದ ಬಳಿಕ ಹಿರಿಯ ಶಾಸಕರು ದೆಹಲಿಗೆ ತೆರಳಿ, ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆ. ಅದೇ ಸಮಯದಲ್ಲಿ ಸಿದ್ದರಾಮಯ್ಯ ಕೂಡ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಈವರೆಗೂ ಹಾಲು-ಜೇನಿನಂತಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ಬಾಂಧವ್ಯ ಬಜೆಟ್‌ ಅಧಿವೇಶನದ ನಂತರ ಸ್ವರೂಪ ಬದಲಿಸುವ ಸಾಧ್ಯತೆ ಇದೆ. ಅದಕ್ಕೆ ಹಿರಿಯ ಶಾಸಕರು ಕೂಡ ಧ್ವನಿಗೂಡಿಸಲಿದ್ದಾರೆ.

ಇತ್ತ ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಕಿರಿಯ ಶಾಸಕರು ಬ್ಯಾಟಿಂಗ್‌ ಮಾಡುತ್ತಿದ್ದು, ಡಿ.ಕೆ.ಶಿವಕುಮಾರ್‌ ಅವರಿಗೆ ಅವಕಾಶ ನೀಡಬೇಕೆಂದು ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ತೆರೆಮರೆಯಲ್ಲಿ ಕುರ್ಚಿ ಪೈಪೋಟಿ ಭಾರಿ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು ಬಜೆಟ್‌ನ ಮಾಹಿತಿ ನೀಡುವ ನೆಪದಲ್ಲಿ ದೆಹಲಿಗೆ ತೆರಳುತ್ತಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

ಡಿ.ಕೆ.ಶಿವಕುಮಾರ್‌ ಅಸ್ಸಾಂ ಚುನಾವಣೆಯ ಉಸ್ತುವಾರಿಯಾಗಿರುವುದರಿಂದ ಪದೇ ಪದೇ ದೆಹಲಿಗೆ ತೆರಳುತ್ತಿದ್ದು, ಹೈ ಕಮಾಂಡ್‌ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಆದರೆ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ಕೊನೆಗೆ ಸಿದ್ದರಾಮಯ್ಯ ಅವರೇ ಅಖಾಡಕ್ಕಿಳಿಯುವ ಸಾಧ್ಯತೆಯಿರುವುದರಿಂದ ರಾಜಕೀಯ ಯಾವ ರೀತಿ ಬದಲಾಗಲಿದೆ ಎಂದು ಕಾದುನೋಡಬೇಕಿದೆ.

RELATED ARTICLES

Latest News