ಬೆಂಗಳೂರು,ಮಾ.17- ತಾಯಿ ಹಾಗೂ ಸಹೋದರಿಗೆ ನಿಂದಿಸಿದ್ದಲ್ಲದೇ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಯುವಕನನ್ನು ಸ್ನೇಹಿತನೇ ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ನಡೆದಿದೆ. ಬಿಹಾರ ಮೂಲದ ಕುನಾಲ್‌ಕುಮಾರ್(22) ಕೊಲೆಯಾದ ಯುವಕ.
ಕನ್ನಮಂಗಲದ ಅಟ್ಟಿಮಾರ ಗೊರವಿಗೆರೆಯ ಮನೆಯೊಂದರ ಮೊದಲ ಮಹಡಿಯಲ್ಲಿ ಕುನಾಲ್‌ಕುಮಾರ್ ಹಾಗೂ ಬಿಹಾರದವನೇ ಆದ ನಸ್ರುಲ್ಲಾ (24) ಹಾಗೂ ಮತ್ತೊಬ್ಬ ರೂಂ ಮಾಡಿಕೊಂಡು ವಾಸವಿದ್ದರು.
ಇವರೆಲ್ಲರೂ ಗೊರವಿಗೆರೆಯ ವೇರ್‌ಹೌಸ್‌ನ ಕೋಲ್ಡ್ ಸ್ಟೋರೇಜ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ 15 ದಿನಗಳ ಹಿಂದೆ ಯಾವುದೋ ವಿಚಾರಕ್ಕೆ ಗಲಾಟೆಯಾದಾಗ ನಸ್ರುಲ್ಲಾ ತಾಯಿ ಹಾಗೂ ಸಹೋದರಿಗೆ ಕುನಾಲ್ ಕೆಟ್ಟದಾಗಿ ಬೈದಿದ್ದಾನೆ.
ಇದರಿಂದಾಗಿ ಕುನಾಲ್ ಮೇಲೆ ನಸ್ರುಲ್ಲಾ ಹಗೆ ಸಾಧಿಸುತ್ತಿದ್ದನು. ಮಧ್ಯರಾತ್ರಿ 12.30 ರ ಸುಮಾರಿನಲ್ಲಿ ಕುನಾಲ್ ಕುಡಿದು ರೂಮ್‌ಗೆ ಬಂದು ಯಾವುದೋ ವಿಚಾರಕ್ಕೆ ಜಗಳವಾಡಿದ್ದಾನೆ. ಮೊದಲೇ ಆತನ ಮೇಲೆ ಕೋಪವಿದ್ದ ಕಾರಣ ನಸ್ರುಲ್ಲಾ ಕೈಗೆ ಸಿಕ್ಕಿದ ಸುತ್ತಿಗೆಯಿಂದ ಕುನಾಲ್‌ಗೆ ಹೊಡೆದು ಸ್ಥಳದಿಂದ ಪರಾರಿಯಾಗಿದ್ದ.
ಇವರ ಜೊತೆಯಲ್ಲಿದ್ದ ಮತ್ತೊಬ್ಬ ತಕ್ಷಣ ಕುನಾಲ್‌ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರಾದರೂ ಫಲಿಸದೇ ಬೆಳಗಿನ ಜಾವ 2.30 ರಲ್ಲಿ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಆವಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಕೆಲವೇ ನಿಮಿಷಗಳಲ್ಲಿ ಆರೋಪಿ ನಸ್ರುಲ್ಲಾನನ್ನು ದಾಬಸ್‌ಪೇಟೆಯ ನೀಡವಂಡ ರೈಲ್ವೆ ನಿಲ್ದಾಣದ ಬಳಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
