ಬೆಂಗಳೂರು,ಮಾ.18- ಹೊಸ ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಎಲ್ಲೆಲ್ಲಿ ಕೊರತೆ ಇದೆಯೋ ಅಂತಹ ಕಡೆ ಆದ್ಯತೆ ಮೇರೆಗೆ ಬಸ್‌ಗಳನ್ನು ಒದಗಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.
ಸದಸ್ಯರಾದ ಭಾರತಿ ಶೆಟ್ಟಿ ಹಾಗೂ ಗೋವಿಂದ್ ರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಬಂದ ಮೇಲೆ ಸುಮಾರು 6 ಸಾವಿರ ಹೊಸ ಬಸ್ ಖರೀದಿ ಮಾಡಲು ತೀರ್ಮಾನಿಸಿದ್ದೇವೆ. ಇದರ ಮೊದಲ ಭಾಗವಾಗಿ ಹೊಸ ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದೆ, ಪ್ರಕ್ರಿಯೆಯಿಂದ ತಡವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಸಾವಿರ ಕೋಟಿ ರೂ. ಸಾಲ ಕೊಟ್ಟಿದ್ದಾರೆ, ಅದನ್ನ ಕೆ ಎಸ್ ಆರ್ ಟಿಸಿ ತೀರಿಸುತ್ತಿದೆ. ಇಲಾಖೆಯಲ್ಲಿ ಒಟ್ಟು 6 ಸಾವಿರ ಕೋಟಿ ರೂ. ಸಾಲ ಇದೆ. ಇದನ್ನು ಸರ್ಕಾರವೇ ತೀರಿಸಲಿದೆ ಎಂದು ಹೇಳಿದರು.
ನಾನು ಮಂತ್ರಿ ಆದಾಗ 4099 ಕೋಟಿ ಸಾಲ ಇತ್ತು. ಹಿಂದಿನ ಸರ್ಕಾರ ಬಸ್ ಖರೀದಿ ಮಾಡಿರಲಿಲ್ಲ, ನೇಮಕಾತಿ ಆಗಿರಲಿಲ್ಲ. ನಮ ಸರ್ಕಾರ ಬಂದ ಮೇಲೆ ಸುಮಾರು 6 ಸಾವಿರ ಹೊಸ ಬಸ್ ನಾವು ಖರೀದಿ ಮಾಡಿದ್ದೇವೆ. ಅವಧಿ ಮೀರಿರುವ ಯಾವುದೇ ಬಸ್ ನಮಲ್ಲಿ ಇಲ್ಲ. 1 ಲಕ್ಷ ನಿತ್ಯ ಬಸ್ ಟ್ರಿಪ್ ಇದೆ, ಒಂದೋ ಎರಡೋ ಸಮಸ್ಯೆ ಆಗಬಹುದು. ಇದು ಇಂದೂ ಆಗುತ್ತಿದೆ, ಮುಂದೆಯೂ ಆಗುತ್ತದೆ ಎಂದರು.
ಇದಕ್ಕೂ ಮುನ್ನ ಸದಸ್ಯೆ ಭಾರತಿ ಶೆಟ್ಟಿ ಅವರು, ಶಕ್ತಿ ಯೋಜನೆ ಹಣ ಸರ್ಕಾರದಿಂದ ಬಾಕಿ ಇದೆ. ಇದರಿಂದ ಇಲಾಖೆಗೆ ಅರ್ಥಿಕ ಕೊರತೆ ಉಂಟಾಗಿದೆ. ನಮ ಕಾಲದಲ್ಲಿ ಬಸ್ ಸರಿ ಇತ್ತು. ಅದಕ್ಕೆ ಹೊಸ ಬಸ್ ಖರೀದಿ ಮಾಡಿಲ್ಲ. ಈಗ ಸರಿಯಿಲ್ಲ. ಹೊಸ ಬಸ್ ಖರೀದಿ ಮಾಡಬೇಕು. ನಿಮ ಅವಧಿಯಲ್ಲಿ ಕಳೆದ ವರ್ಷ ಖರೀದಿ ಮಾಡಿದ್ದ ಬಸ್‌ಗಳು ಇನ್ನು ಬಂದಿಲ್ಲ. ಈ ವರ್ಷದ ಬಸ್ ಕೂಡಾ ಇನ್ನು ಬಂದಿಲ್ಲ. ಯಾವಾಗ ಬಸ್ ಬರುತ್ತದೆ? ಎಂದು ಪ್ರಶ್ನೆ ಮಾಡಿದರು.
ಜೆಡಿಎಸ್‌ನ ಗೋವಿಂದ್ ರಾಜ್, ಕೇಂದ್ರದ ಜಿಸಿಸಿ ಬಸ್ ಯಾವಾಗ ಬರುತ್ತದೆ? ಶಕ್ತಿ ಯೋಜನೆಯಿಂದ 4 ಸಾವಿರ ಕೋಟಿ ರೂ. ಬಾಕಿ ಇದೆ. ಶಕ್ತಿ ಯೋಜನೆ ಆತುರವಾಗಿ ಜಾರಿ ಮಾಡಿದಿರಿ. ಶಕ್ತಿ ಯೋಜನೆಗೆ ಬಾಕಿ ಹಣ ತಗೊಂಡು ಹೊಸ ಬಸ್ ಖರೀದಿ ಮಾಡಬೇಕು. ನೌಕರರ ವೇತನ ಪರಿಷ್ಕರಣೆ ಮಾಡಿ ಎಂದು ಒತ್ತಾಯಿಸಿದರು.
ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿ, ನಾನು ಸಚಿವ ಆದಾಗ 4,099 ಕೋಟಿ ಸಾಲ ಇತ್ತು. ಹಿಂದಿನ ಸರ್ಕಾರ ಬಸ್ ಖರೀದಿ ಮಾಡಿರಲಿಲ್ಲ, ನೇಮಕಾತಿ ಆಗಿರಲಿಲ್ಲ ನಾನು ಮಾಡಿದ್ದೇನೆ. 4 ವರ್ಷಕ್ಕೆ ಒಮೆ ವೇತನ ಪರಿಷ್ಕರಣೆ ಆಗಬೇಕಿತ್ತು. 2020, 2021, 2022 ರಲ್ಲಿ ವೇತನ ಪರಿಷ್ಕರಣೆ ಆಗಲಿಲ್ಲ. ಆಂದಿನ ಸರ್ಕಾರ 2023ರಲ್ಲಿ ತೀರ್ಮಾನ ಮಾಡಿತ್ತು. 2025ಕ್ಕೆ ವೇತನ ಪರಿಷ್ಕರಣೆ ಮಾಡಿದ್ದೇವೆ. ನಾನು ಸಿಎಂಗೆ ಹೇಳಿ 26 ತಿಂಗಳ ವೇತನ ಬಿಡುಗಡೆ ಮಾಡಲಾಗಿದೆ. ಒಂದು ವರ್ಷ ತಡವಾಯ್ತು ಅಷ್ಟೇ ಎಂದು ಸಮರ್ಥನೆ ಮಾಡಿಕೊಂಡರು.
