ಬೆಂಗಳೂರು, ಮಾ.18- ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯಾಗುತ್ತಿದ್ದು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ವ್ಯಾಪಕ ಬೇಡಿಕೆಗಳಿವೆ. ಮೂಲ ಸೌಲಭ್ಯಗಳು ಇರುವ ಸುಮಾರು 70ರಿಂದ 80 ಹಾಸ್ಟೆಲ್‌ಗಳ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ, ಹನುಮನ ಗೌಡ ಪಾಟೀಲ ಪ್ರಶ್ನೆ ಕೇಳಿ, ತಮ ತಾಲ್ಲೂಕಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳನ್ನು ಮಂಜೂರು ಮಾಡಿಲ್ಲ ಎಂದು ಆಕ್ಷೇಪಿಸಿದರು. ನೆರೆಯ ತಾಲ್ಲೂಕುಗಳಿಗೆ ಹೆಚ್ಚಿನ ಹಾಸ್ಟೆಲ್ ಮಂಜೂರಾಗಿರುವುದಾಗಿಯೂ ವಿವರಿಸಿದರು.
ಉತ್ತರ ನೀಡಿದ ಸಚಿವ ಶಿವರಾಜ ತಂಗಡಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮೂಲ ಸೌಲಭ್ಯಗಳಿವೆ. ಅದಕ್ಕಾಗಿ ಎರಡು ಹಾಸ್ಟೆಲ್ ಗಳನ್ನು ನೀಡಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲಿ ಹಾಸ್ಟೆಲ್ ಸೌಲಭ್ಯಕ್ಕಾಗಿ ಹೆಚ್ಚಿನ ಬೇಡಿಕೆ ಇದೆ. ಕಳೆದ ವರ್ಷ 1.41 ಲಕ್ಷ ಮಕ್ಕಳಿಗೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಹಾಸ್ಟೆಲ್ ಸೌಲಭ್ಯ ನೀಡಲಾಗಿಲ್ಲ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ತಮ ಸರ್ಕಾರ ಎಂದೆಂದೂ ಇಲ್ಲದಷ್ಟು ಸಂಖ್ಯೆಯಲ್ಲಿ ಹಾಸ್ಟೆಲ್‌ಗಳನ್ನು ಮಂಜೂರು ಮಾಡಿದೆ. 2023 ರಿಂದ ಕ್ರಮವಾಗಿ 156 ಮತ್ತು 62 ಹಾಸ್ಟೆಲ್ ಗಳನ್ನು ಮಂಜೂರು ಮಾಡಲಾಗಿದ್ದು ಈ ವರ್ಷ 50 ಹಾಸ್ಟೆಲ್‌ಗಳು ಬಜೆಟ್‌ನಲ್ಲಿ ಘೋಷಣೆಯಾಗಿದೆ. ಒಟ್ಟು 250 ಹಾಸ್ಟೆಲ್‌ಗಳನ್ನು ನಮ ಸರ್ಕಾರ ಆರಂಭಿಸಿದೆ. ಆದರೆ ಇನ್ನೂ 250 ಹಾಸ್ಟೆಲ್‌ಗಳಿಗೆ ಬೇಡಿಕೆ ಇದೆ ಎಂದು ವಿವರಿಸಿದ್ದರು.
ಸಭಾಧ್ಯಕ್ಷ ಯು.ಟಿ.ಖಾದರ್, ದೀನ ದಯಾಳ್ ಉಪಾಧ್ಯಾಯ ವಸತಿ ಶಾಲೆಗಳಲ್ಲಿ ಎಲ್ಲಾ ಜಾತಿಗಳ ವಿದ್ಯಾರ್ಥಿಗಳನ್ನೊಳಗೊಂಡಂತೆ ಸಾವಿರ ಪ್ರವೇಶಾವಕಾಶಕ್ಕೆ ಅನುಮತಿ ಇದೆ. ತಮ ಕ್ಷೇತ್ರದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಿದೆ. ಪೀಠೋಪಕರಣ ಕೆಲಸ ಬಾಕಿ ಇದೆ, ಸಮಾಜ ಕಲ್ಯಾಣ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಗಳು ಜಂಟಿಯಾಗಿ ಸಮಲೋಚನೆ ನಡೆಸಿ, ಪೀಠೋಪಕರಣ ಕೆಲಸವನ್ನು ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು.
