Saturday, May 2, 2026
Homeಜಿಲ್ಲಾ ಸುದ್ದಿಗಳುಹಾಸನ : ಗಾಂಜಾ ಅಮಲಿನಲ್ಲಿ ಗೆಳೆಯನನ್ನೇ ಸುಟ್ಟು ಕೊಂದ ಕ್ರೂರಿಗಳು

ಹಾಸನ : ಗಾಂಜಾ ಅಮಲಿನಲ್ಲಿ ಗೆಳೆಯನನ್ನೇ ಸುಟ್ಟು ಕೊಂದ ಕ್ರೂರಿಗಳು

Hassan: Friends burn friend to death

ಹಾಸನ,ಮಾ.23- ಸ್ನೇಹದ ಹೆಸರಿನಲ್ಲಿ ವಿಶ್ವಾಸ ಗಳಿಸಿ, ಬಳಿಕ ಅದೇ ಸ್ನೇಹಿತನನ್ನು ಕ್ರೂರವಾಗಿ ಹತ್ಯೆ ಮಾಡಿದ ದಾರುಣ ಘಟನೆ ಹಾಸನ ತಾಲ್ಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಅರಸೀಕೆರೆ ತಾಲ್ಲೂಕಿನ ಕಾಡಯ್ಯನಕೊಪ್ಪಲು ಗ್ರಾಮದ ನಿವಾಸಿ ವರುಣ್‌ (22) ಕೊಲೆಯಾದ ಯುವಕ. ಗಾಂಜಾ ಅಮಲಿನಲ್ಲಿ ಹಾಗೂ ಹಣಕಾಸು ವ್ಯವಹಾರಗಳ ಹಿನ್ನೆಲೆ ಉಂಟಾದ ವೈಮನಸ್ಯವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ.ಆರೋಪಿಗಳಾದ ಸ್ನೇಹಿತರು ಹಣಕಾಸು ವಿಚಾರವಾಗಿ ಮಾತುಕತೆ ನಡೆಸುವುದಾಗಿ ಹೇಳಿ ವರುಣ್‌ನನ್ನು ಕರೆದುಕೊಂಡು ಹೋಗಿದ್ದರೆಂದು ತಿಳಿದುಬಂದಿದೆ.

ಮೊದಲು ನಿಟ್ಟೂರು ಸಮೀಪದ ತೋಟದ ಮನೆಯಲ್ಲಿ ವರುಣ್‌ ಮೇಲೆ ಹಲ್ಲೆ ನಡೆಸಲಾಗಿದ್ದು, ನಂತರ ಹಾಸನದಲ್ಲಿರುವ ಶಶಾಂಕ್‌ ಎಂಬಾತನ ಬಾಡಿಗೆ ಕೊಠಡಿಗೆ ಕರೆದೊಯ್ದು ಮತ್ತೊಮೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ವರುಣ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕೊಲೆ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಆರೋಪಿಗಳು ಶವವನ್ನು ಜೇನುಕಲ್‌ ಸಿದ್ದೇಶ್ವರ ಸ್ವಾಮಿ ಬೆಟ್ಟದ ತಪ್ಪಲಿಗೆ ಕೊಂಡೊಯ್ದು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಿನಿಮೀಯ ಶೈಲಿಯಲ್ಲಿ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ವರುಣ್‌ ಮಾ.10ರಿಂದ ಕಾಣೆಯಾಗಿದ್ದು, ಆತ ಮನೆಗೆ ವಾಪಸ್ಸು ಬರದ ಹಿನ್ನೆಲೆಯಲ್ಲಿ ತಾಯಿ ಕಲಾವತಿ ಮಾ.15ರಂದು ಗಂಡಸಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಅನುಮಾನಾಸ್ಪದ ಚಲನವಲನಗಳ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ.ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಶಶಾಂಕ್‌ ಸೇರಿದಂತೆ ಒಟ್ಟು ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ.ಘಟನೆ ಸಂಬಂಧ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News