ಬೆಂಗಳೂರು,ಮಾ.23- ಕೇರಳದಿಂದ ನಗರಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಿಗ್ಗೆ ಸಂಭವಿಸಿದೆ.
ಮೃತಪಟ್ಟವರನ್ನು ಕೇರಳದ ಕಾಜಿಕೋಟೆಯ ಮೊಹಮದ್ ಫರಾನ್ (22), ಸುಲ್ಪಿ (45), ಬೆಂಗಳೂರಿನ ಕಲಾಸಿಪಾಳ್ಯದ ನಿವಾಸಿ ರಶೀದ್ (45) ಹಾಗೂ ಆಡುಗೋಡಿಯ ಅಣ್ಣೆಪಾಳ್ಯ ನಿವಾಸಿ ಸಾಕೇರ್(25) ಎಂದು ಗುರುತಿಸಲಾಗಿದೆ.
ತಡರಾತ್ರಿ ಕೇರಳದ ಕ್ಯಾಲಿಕಟ್‌ನಿಂದ ಪಿಕೆ ಟ್ರಾವೆಲ್ಸ್ ಖಾಸಗಿ ಬಸ್ಸು ಬೆಂಗಳೂರಿಗೆ 42 ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿತ್ತು. ಬೆಳಗಿನ ಜಾವ 4.10ರ ಸುಮಾರಿನಲ್ಲಿ ಈ ಬಸ್ಸು ಬೆಂಗಳೂರು-ಮೈಸೂರು ಎಕ್‌್ಸಪ್ರೆಸ್ ವೇ ಚನ್ನಪಟ್ಟಣ ತಾಲ್ಲೂಕಿನ ಪುಟ್ಟಪ್ಪನದೊಡ್ಡಿ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು 10 ಮೀಟರ್ ದೂರ ಸಂಚರಿಸಿದೆ.
ಪರಿಣಾಮ ಬಸ್ಸಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಕೇರಳದ ಕಣ್ಣೂರಿನ ಅಬ್ದುಲ್ ಮತ್ತು ಅಲೇನ್ ಎಂಬುವರನ್ನು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಒಂದು ವೇಳೆ ತಡೆಗೋಡೆ ಇಲ್ಲದಿದ್ದರೆ ಇನ್ನೂ ಭಾರೀ ಸಾವು-ನೋವು ಸಂಭವಿಸುತ್ತಿತ್ತು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಚನ್ನಪಟ್ಟಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ನಾಲ್ವರ ಮೃತದೇಹಗಳನ್ನು ಹೊರತೆಗೆದು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಬಸ್ಸು ಚಾಲಕ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಬಸ್ಸು ಚಾಲಕನ ನಿದ್ರೆ ಮಂಪರಿನಿಂದ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
