ಬೆಂಗಳೂರು,ಮಾ.25- ರಾಜ್ಯದ ಎಲ್ಲಾ 224 ಮಂದಿ ಶಾಸಕರು ಮುಖ್ಯಮಂತ್ರಿಯಾಗಲು ಅರ್ಹರಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಷಯದಲ್ಲಿ ನಯವಾಗಿ ಹೇಳಿ ಜಾರಿಕೊಂಡರು.
ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಸಾಮಾನ್ಯ ಚರ್ಚೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ ಅವರನ್ನು ಬಿಜೆಪಿಯ ಹಿರಿಯ ಶಾಸಕ ಸುನೀಲ್‌ಕುಮಾರ್ ಅವರು ಮಧ್ಯಪ್ರವೇಶಿಸಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೂ ಖುಷಿಯಾಗುತ್ತದೆ ಎಂದು ಹೇಳಲಿಲ್ಲ ಎಂದು ಛೇಡಿಸಿದರು.
ಆಗ ಮುಖ್ಯಮಂತ್ರಿಗಳು ನಮ ಪಕ್ಷದ ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಎಂಬುದನ್ನು ಪುನರುಚ್ಚರಿಸಿದರು.
ನಮಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಖುಷಿಯಾಗುತ್ತದೆ. 224 ಶಾಸಕರು ಮುಖ್ಯಮಂತ್ರಿಯಾಗಲು ಅರ್ಹರು. ಯಾರೇ ಮುಖ್ಯಮಂತ್ರಿಯಾದರೂ ಖುಷಿ ಪಡುತ್ತೇನೆ ಎಂದರು.
ಸಚಿವರಾದ ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ದಿನೇಶ್‌ಗುಂಡೂರಾವ್, ಶಾಸಕ ಕೋನರೆಡ್ಡಿ ಸೇರಿದಂತೆ ಕೆಲವು ಹೆಸರನ್ನು ಮಾತ್ರ ಉಲ್ಲೇಖಿಸಿ ಅವರೂ ಮುಖ್ಯಮಂತ್ರಿಯಾಗಬಾರದೇ ಎಂದು ಪ್ರಶ್ನಿಸಿದರು.ಅವರೆಲ್ಲರಿಗೂ ಯೋಗ್ಯತೆ ಇದೆ, ಅವಕಾಶ ಸಿಗಲ್ಲ ಅಷ್ಟೇ ಎಂದರು.
ಇದಕ್ಕೂ ಮುನ್ನ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಸಭಾಧ್ಯಕ್ಷರು ಶಾಸಕರ ಗ್ರೂಪ್ ಫೋಟೊ ತೆಗೆಸಿದ್ದಾರೆ. ಅವರ ಬಗ್ಗೆಯೇ ಅನುಮಾನ ಮೂಡಿದೆ. ಐದು ವರ್ಷಕ್ಕೊಮೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ತೆಗೆಸಿದ್ದಾರೆ. ಅಧ್ಯಕ್ಷರ ಬಗ್ಗೆಯೇ ನಮಗೆ ಅನುಮಾನ. ಐದು ವರ್ಷಕ್ಕೊಮೆ ಫೋಟೊ ತೆಗೆಸುವುದು ಸಂಪ್ರದಾಯ. ಅಧ್ಯಕ್ಷರು ಯಾವಾಗ ಹೋಗುತ್ತಾರೊ ಹೇಳಿ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಹೊಸ ಕಿಟಕಿ, ಬಾಗಿಲುಗಳನ್ನು ಮಾಡಿಸಿದ್ದಾರೆ ಎಂದಾಗ, ಸಿದ್ದರಾಮಯ್ಯ ಮಾತನಾಡಿ, ಹೈಕಮಾಂಡ್ ತೀರ್ಮಾನ ಮಾಡುವವರೆಗೂ ಅವರು ಇರುತ್ತಾರೆ, 2028ರ ಚುನಾವಣೆಯಲ್ಲೂ ಗೆಲ್ಲುತ್ತಾರೆ, ನೀವು ಏನೇ ಕಿತಾಪತಿ ಮಾಡಿದರೂ, ಜಾಕ್ ಹಾಕಿ ಎತ್ತಿದರೂ ಅವರು ಮನ್ನಣೆ ಕೊಡುವುದಿಲ್ಲ ಎಂದರು.
ಆಗ ಅಶೋಕ್ ಅವರು, ಅವರ ಕನಸುಗಳು ಎಂದು ಮರು ಪ್ರಶ್ನಿಸಿದರು.
ಮಾತು ಮುಂದುವರೆಸಿದ ಮುಖ್ಯಮಂತ್ರಿ, ಸಿಎಂ ಆಗುವ ಕನಸು ನಿಮಗೆ ಇಲ್ಲವೇ? ಎಂದು ಮರು ಪ್ರಶ್ನಿಸಿದ್ದರಲ್ಲದೆ, ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ಅಶೋಕ್ ಮುಖ್ಯಮಂತ್ರಿಯಾದರೆ ಖುಷಿ ಪಡುವೆ. ವಿಜಯೇಂದ್ರ ಅವರೂ ಕಾಯುತ್ತಿದ್ದಾರೆ ಎಂದು ಛೇಡಿಸಿದರು.
