ಬೆಂಗಳೂರು, ಏ.28: ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ನಾಯಕತ್ವದ ಗೊಂದಲ ಮುಂದುವರೆಯಲು ಅವಕಾಶ ನೀಡಬಾರದು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊಂದಲ ಮುಂದುವರೆದಷ್ಟು ಪಕ್ಷಕ್ಕೆ ಹಾನಿಯಾಗುತ್ತದೆ. ಹೀಗಾಗಿ ಶೀಘ್ರವೇ ನಾಯಕತ್ವದ ವಿಚಾರದ ಗೊಂದಲವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಗೊಂದಲ ನಿವಾರಣೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತ ಮನಸ್ಸನ್ನು ಹೊಂದಿದ್ದು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸೂಚನೆಗಳನ್ನು ಪಾಲಿಸುವುದಾಗಿ ಈಗಾಗಲೇ ತಿಳಿಸಿದ್ದಾರೆ ಎಂದರು.
ರಾಹುಲ್ ಗಾಂಧಿಯವರ ತೀರ್ಮಾನದಂತೆ ನಡೆದುಕೊಳ್ಳೋಣ ಎಂದಿರುವ ಸಿದ್ದರಾಮಯ್ಯ ಅವರು ಅಧಿಕಾರ ಮುಂದುವರಿಸಲು ಸಿದ್ಧರಿದ್ದಾರೆ. ಹಾಗೆಯೇ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡಲು ಕೂಡ ಸಿದ್ಧರಿದ್ದಾರೆ. ಒಟ್ಟಾರೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎಂದು ಹೇಳಿದರು.
ನಾಯಕತ್ವ ಬದಲಾವಣೆ ವಿಚಾರ ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಅದರಲ್ಲಿ ಪಕ್ಷದ ಭವಿಷ್ಯವೂ ಅಡಗಿದೆ. ಹೀಗಾಗಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಮುಖ್ಯಮಂತ್ರಿಯವರು ರಾಹುಲ್ ಗಾಂಧಿಯವರ ಸೂಚನೆ ಪಾಲನೆ ಮಾಡುವುದಾಗಿ ಈಗಾಗಲೇ ತಿಳಿಸಿದ್ದಾರೆ ಎಂದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ. ಒಮ್ಮೆ ಅಧಿಕಾರ ಕಳೆದುಕೊಂಡವರು ಮತ್ತೆ ಪಡೆಯುವ ಅವಕಾಶವಿರುತ್ತದೆ. ಸಿದ್ದರಾಮಯ್ಯ ಅವರನ್ನು ಮುಂದುವರಿಸಬೇಕು ಎಂಬ ನಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿದ್ದೇವೆ ಎಂದ ಅವರು, ದಲಿತರು ಮುಖ್ಯಮಂತ್ರಿಯಾಗಬೇಕು ಎಂಬುದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದರು.
ಅಹಿಂದ ವರ್ಗಕ್ಕೆ ನಿಜವಾಗಿಯೂ ಸಮಾಧಾನವಾಗಿಲ್ಲ. ಮೊದಲ ಅವಧಿಯ ಸಿದ್ದರಾಮಯ್ಯ ಹಾಗೂ ಈಗಿನ ಸಿದ್ದರಾಮಯ್ಯ ಅವರಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೆರಡು ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಆ ಚುನಾವಣೆಯಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಹೆಚ್ಚಿನ ಶ್ರಮ ಅಗತ್ಯವಿದೆ ಎಂದು ರಾಜಣ್ಣ ಹೇಳಿದರು.
