Wednesday, April 29, 2026
Homeರಾಜ್ಯಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ : ಉಗ್ರ ಶಾರಿಕ್‌ಗೆ 10 ವರ್ಷ ಜೈಲು

ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ : ಉಗ್ರ ಶಾರಿಕ್‌ಗೆ 10 ವರ್ಷ ಜೈಲು

Mangaluru cooker bomb blast case: Terrorist Sharik gets 10 years in prison

ಬೆಂಗಳೂರು: ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಉಗ್ರ ಶಾರಿಕ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ‌ ಸ್ಪೆಷಲ್ ಕೋರ್ಟ್‌ ಇಂದು ತೀರ್ಪು ಪ್ರಕಟಿಸಿದೆ. ಮಂಗಳೂರಿನ ನಾಗುರಿ ಎಂಬಲ್ಲಿ ನಡೆದ ಭೀಕರ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್‌ಗೆ ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು ಇಂದು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಈ ಪ್ರಕರಣದಲ್ಲಿ ಶಾರಿಕ್ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ಮತ್ತು ಮಾಡಿದ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಧೀಶರು ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.

10 ವರ್ಷಗಳ ಕಾಲ‌ ಶಿಕ್ಷೆ ಮತ್ತು 94 ಸಾವಿರ ದಂಡ‌‌ ವಿಧಿಸಿದೆ. ಇದೆಲ್ಲದರ ಜೊತೆಗೆ ಶಿವಮೊಗ್ಗ ಜೈಲಿಗೆ ಟ್ರ್ಯಾನ್ಸ್ ಫರ್ ಮಾಡಿ ಅಂತ ಶಾರಿಕ್‌ ಕೇಳಿದ್ದಾನೆ. ಸರಿಯಾಗಿ ನಿದ್ದೆ ಬಾರದೇ 3 ವರ್ಷ ಆಗಿದೆ, ಟ್ಯಾಬ್ಲೆಟ್ ಎಲ್ಲಾ ಸರಿ ಹೋಗುತ್ತಿಲ್ಲ ಎಂದು ಮನವಿ ಮಾಡಿದ್ದಾನೆ. ಎಲ್ಲವೂ ಬೇಕು ಅಂದರೆ ಹೇಗೆ ಎಲ್ಲಾ ಖೈದಿಗಳು ಬೆಂಗಳೂರಿಗೆ ವರ್ಗಾವಣೆ ಆಗ್ಬೇಕು ಅಂತ ಅರ್ಜಿ ಹಾಕ್ತಾರೆ ನೀವೇನು ಶಿವಮೊಗ್ಗ ಕೇಳ್ತಿದಿರಾ ಅಂತ ಜಡ್ಜ್ ಪ್ರಶ್ನೆ ಮಾಡಿದ್ದಾರೆ.

ಶಾರಿಕ್ ತನ್ನ ತಪ್ಪನ್ನ ಒಪ್ಪಿಕೊಂಡಿದ್ದೇಕೆ.. ?
ವಿಚಾರಣೆಯ ಹಂತದಲ್ಲಿ ಆರೋಪಿ ಶಾರಿಕ್ ತಾನು ಮಾಡಿದ ಕೃತ್ಯದ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದನು. ಎನ್‌ಐಎ ಅಧಿಕಾರಿಗಳು ಕಲೆಹಾಕಿದ್ದ ಭದ್ರವಾದ ಸಾಕ್ಷ್ಯಗಳ ಮುಂದೆ ತಪ್ಪಿಸಿಕೊಳ್ಳಲು ದಾರಿಯಿಲ್ಲದೆ ಆತ ಶರಣಾಗಿದ್ದನು. ಬೆಂಗಳೂರಿನ ಎನ್‌ಐಎ ವಿಶೇಷ ಕೋರ್ಟ್‌ನಲ್ಲಿ ಈ ಪ್ರಕ್ರಿಯೆ ನಡೆದಿದ್ದು, ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ವಿಚಾರಣೆ ವೇಗವಾಗಿ ಮುಕ್ತಾಯಗೊಂಡು ಇಂದು ಶಿಕ್ಷೆ ಪ್ರಕಟವಾಗಿದೆ.

ನವೆಂಬರ್ 19, 2022ರ ಶನಿವಾರ ಸಾಯಂಕಾಲ 4.30ರ ಸುಮಾರಿಗೆ ಮಂಗಳೂರಿನ ನಾಗುರಿಯ ಬೈದರ್ಕಳ ಗರೋಡಿ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಆರಂಭದಲ್ಲಿ ಇದು ಸಿಲಿಂಡರ್ ಸ್ಫೋಟ ಎಂದು ಭಾವಿಸಲಾಗಿತ್ತಾದರೂ, ತನಿಖೆ ಚುರುಕುಗೊಂಡಂತೆ ಇದೊಂದು ಯೋಜಿತ ಭಯೋತ್ಪಾದನಾ ಕೃತ್ಯ ಎಂಬುದು ಸಾಬೀತಾಗಿತ್ತು. ಮಂಗಳೂರಿನ ಪ್ರಸಿದ್ದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಾರಣಹೋಮ ನಡೆಸುವ ಉದ್ದೇಶದಿಂದ ಶಾರೀಕ್ ಕುಕ್ಕರ್ ಬಾಂಬ್ ಹೊತ್ತು ಹೊರಟಿದ್ದ. ಟೈಮರ್ ಎಡವಟ್ಟಿನಿಂದ ಬಾಂಬ್ ದಾರಿಯಲ್ಲೇ ಸ್ಫೋಟಗೊಂಡಿತ್ತು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರೀಕ್, ತನ್ನ ಗುರುತನ್ನು ಮರೆಮಾಚಲು ಭಾರೀ ಸಂಚು ಹೂಡಿದ್ದ. ‘ಪ್ರೇಮ್ ಸಾಗರ್’ ಎಂಬ ಹೆಸರಿನ ನಕಲಿ ಆಧಾರ್ ಕಾರ್ಡ್ ಇರಿಸಿಕೊಂಡಿದ್ದ ಈತ, ಕೈಗೆ ದೇವರ ನೂಲು ಕಟ್ಟಿಕೊಂಡು ಹಿಂದೂವಿನಂತೆ ಬಿಂಬಿಸಿಕೊಂಡಿದ್ದ. ಇದಕ್ಕೂ ಮುನ್ನ 2020ರಲ್ಲಿ ಮಂಗಳೂರಿನ ಗೋಡೆಗಳ ಮೇಲೆ ಲಷ್ಕರ್ ಮತ್ತು ತಾಲಿಬಾನ್ ಪರ ಬರಹ ಬರೆದು ಜೈಲು ಪಾಲಾಗಿದ್ದ ಈತ, ಜಾಮೀನಿನ ಮೇಲೆ ಹೊರಬಂದು ಮೈಸೂರಿನಲ್ಲಿ ಅಡಗಿ ಕುಳಿತು ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದ.

RELATED ARTICLES

Latest News