Thursday, April 30, 2026
Homeರಾಜಕೀಯಮತ್ತೆ ತಾರಕಕ್ಕೇರಿದ ಸಿಎಂ ಕುರ್ಚಿ ಕಚ್ಚಾಟ, ತೀವ್ರಗೊಂಡ ಬಣಗಳ ಬಡಿದಾಟ

ಮತ್ತೆ ತಾರಕಕ್ಕೇರಿದ ಸಿಎಂ ಕುರ್ಚಿ ಕಚ್ಚಾಟ, ತೀವ್ರಗೊಂಡ ಬಣಗಳ ಬಡಿದಾಟ

CM chair fight heats up again, factional clashes intensify

ಬೆಂಗಳೂರು,ಏ.28- ಸಿಎಂ ಕುರ್ಚಿ ಕದನ ದಿನೇದಿನೇ ತಾರಕಕ್ಕೇರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಬಣಗಳ ನಡುವಿನ ಬಡಿದಾಟ ತೀವ್ರಗೊಂಡಿದೆ. ಮುಖ್ಯಮಂತ್ರಿ ಗದ್ದುಗೆ ಪಡೆಯಲು ಡಿಸಿಎಂ ಡಿ.ಕೆ.ಶಿವಕುಮಾರ್‌ರವರು ತಮ ಕಸರತ್ತನ್ನು ಮುಂದುವರೆಸಿದ್ದಾರೆ. ಸಿಎಂ ಸ್ಥಾನದಲ್ಲಿ ಮುಂದುವರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ ಆಪ್ತರ ಮೂಲಕ ತಂತ್ರ ಹೆಣೆಯುತ್ತಿದ್ದಾರೆ.

ತಂತ್ರ-ಪ್ರತಿತಂತ್ರಗಳ ಮೇಲಾಟಗಳು ಜೋರಾಗಿವೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುವುದೇ?, ಅಥವಾ ಸಂಪುಟ ಪುನರ್‌ ರಚನೆಯಾಗುವುದೇ? ಎಂಬ ಚರ್ಚೆಗಳು ನಡೆಯುತ್ತಿವೆ.ಸಂಪುಟ ಪುನರ್‌ ರಚನೆಯಾದರೆ ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯನವರಿಗೆ ಅಬಾಧಿತವಾಗಲಿದೆ. ಸಂಪುಟ ಪುನರ್‌ರಚನೆಯಾಗದಿದ್ದರೆ ನಾಯಕತ್ವ ಬದಲಾವಣೆಯಾಗಿ ಹೊಸ ನಾಯಕನ ನೇತೃತ್ವದಲ್ಲಿ ಹೊಸ ಸಂಪುಟ ರಚನೆಯಾಗುವ ಸಾಧ್ಯತೆ ಇದೆ.

ಸಿಎಂ, ಡಿಸಿಎಂ ಪ್ರತೀದಿನ ಹೊಸ ದಾಳಗಳನ್ನು ಉರುಳಿಸುತ್ತಿದ್ದಾರೆ. ಈಗಾಗಲೇ ಡಿಕೆಶಿಯವರು ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ರಾಜ್ಯ ನಾಯಕತ್ವದ ಬಗ್ಗೆ ಚರ್ಚೆ ನಡೆಸುವಂತೆ ಒತ್ತಡ ಹೇರಿದ್ದಾರೆ. ಮೇ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಇದಕ್ಕೆ ಚಾಲನೆ ಸಿಗಬಹುದು ಎಂದು ಡಿಸಿಎಂ ಅವರ ಆಪ್ತ ವಲಯದಿಂದ ತಿಳಿದುಬಂದಿದೆ.

ಆದರೆ ಸಿಎಂ ಬಣದವರು ಬೇರೆಯೇ ದಾಳ ಉರುಳಿಸಿದ್ದು, ಅಹಿಂದ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಾಜ್ಯಾದ್ಯಂತ ಅಹಿಂದ ಸಮಾವೇಶಗಳನ್ನು ನಡೆಸುವ ಮೂಲಕ ಕಾಂಗ್ರೆಸ್‌‍ ಪಕ್ಷವನ್ನು ಬಲಪಡಿಸುವುದರ ಜೊತೆಗೆ ಸಿಎಂ ಸಿದ್ದರಾಮಯ್ಯನವರ ನಾಯಕತ್ವವನ್ನು ಬಲಪಡಿಸಬೇಕು. 2028ರ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಾವೆಲ್ಲಾ ಸಜ್ಜಾಗುವ ಕ್ರಿಯಾಯೋಜನೆಯನ್ನು ರೂಪಿಸಿರುವ ತಂತ್ರವನ್ನು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ರಾಜಕೀಯ ಕ್ರಾಂತಿ ನಡೆಯುವ ಸಾಧ್ಯತೆ ನಿರೀಕ್ಷಿಸಲಾಗಿದೆ.ಸಿಎಂ-ಡಿಸಿಎಂ ಬಣಗಳ ಸದಸ್ಯರು ತಮತಮ ನಿಲುವಿಗೆ ಅಂಟಿಕೊಂಡಿದ್ದು, ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.ಈ ನಡುವೆ ಯಡಿಯೂರಪ್ಪನವರ ಅಭಿಮಾನೋತ್ಸವ ಮೇ 9 ರಂದು ನಡೆಯಲಿದ್ದು, ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಇದಕ್ಕೆ ಸಡ್ಡು ಹೊಡೆಯಲು ಕಾಂಗ್ರೆಸ್‌‍ ಅಹಿಂದ ಸಮಾವೇಶಗಳನ್ನು ನಡೆಸುವ ಯೋಜನೆ ರೂಪಿಸಿದೆ.

ಅಹಿಂದ ಸಮಾವೇಶಕ್ಕೆ ಹೈಕಮಾಂಡ್‌ ಹಸಿರು ನಿಶಾನೆ ತೋರಿಸಿಲ್ಲ. ಇನ್ನೂ ನಾಯಕತ್ವದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ರಾಜ್ಯ ರಾಜಕಾರಣದಲ್ಲಿ ಮೇ ತಿಂಗಳಿನಲ್ಲಿ ಏನಾಗಲಿದೆಯೋ ಕಾದು ನೋಡಬೇಕು.

RELATED ARTICLES

Latest News