ಮುಂಬೈ, ಏ.7- ಟಾಟಾ ಗ್ರೂಪ್‌ಗೆ ಸೇರಿದ ಏರ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ಯಾಂಪ್ಬೆಲ್ ವಿಲ್ಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಲ್ಸನ್ ಅವರನ್ನು ಜುಲೈ 2022ರಲ್ಲಿ ಏರ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.
ಇದಕ್ಕೂ ಮೊದಲು ಟರ್ಕಿಶ್ ಏರ್‌ಲೈನ್ಸ್ ನ ಮಾಜಿ ಅಧ್ಯಕ್ಷ ಇಲ್ಕರ್ ಆಯ್ಜಿ ಮಾರ್ಚ್ 2022ರಲ್ಲಿ ವಿವಾದದ ನಡುವೆ ಈ ಹುದ್ದೆಯನ್ನು ಸ್ವೀಕರಿಸದಿರುವ ನಿರ್ಧಾರ ಕೈಗೊಂಡಿದ್ದರು.ಟಾಟಾ ಗ್ರೂಪ್ ಜ 2022ರಲ್ಲಿ ಸರ್ಕಾರದಿಂದ ಏರ್ ಇಂಡಿಯಾವನ್ನು ಖರೀದಿಸಿತ್ತು.
ಸದ್ಯ ವಿಲ್ಸನ್ ಅವರು ರಾಜೀನಾಮೆ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿ, ಮಂಡಳಿಗೆ ತಿಳಿಸಿ ರಾಜೀನಾಮೆ ನೀಡಿದ್ದಾರೆ ಎಂದು ಈ ಬೆಳವಣಿಗೆಗೆ ಸಂಬಂಧಿಸಿದ ಮೂಲವೊಂದು ತಿಳಿಸಿದೆ.
ಈ ಬಗ್ಗೆ ಏರ್ ಇಂಡಿಯಾದಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.ಈ ವರ್ಷದ ಆರಂಭದಲ್ಲಿ, ವಿಲ್ಸನ್ ಅವರ ಐದು ವರ್ಷದ ಅವಧಿ 2027ರಲ್ಲಿ ಮುಗಿಯಲಿರುವ ಹಿನ್ನೆಲೆ, ಹೊಸ ಸಿಇಒಗಾಗಿ ಟಾಟಾ ಗ್ರೂಪ್ ಹುಡುಕಾಟ ನಡೆಸುತ್ತಿದೆ ಎಂದು ಮೂಲಗಳು ಹೇಳಿದ್ದವು.
ಇದಲ್ಲದೆ, ಏರ್ ಇಂಡಿಯಾದ ಕಡಿಮೆ ವೆಚ್ಚದ ಉಪಕಂಪನಿಯಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆಯಿಗೂ ಮಾರ್ಚ್ 19ರಿಂದ ಮುಖ್ಯಸ್ಥರಿಲ್ಲ. ವ್ಯವಸ್ಥಾಪಕ ನಿರ್ದೇಶಕ ಅಲೋಕ್ ಸಿಂಗ್ ಅವರು ತಮ್ಮ ಐದು ವರ್ಷದ ಅವಧಿ ಪೂರ್ಣಗೊಳಿಸಿ ಹುದ್ದೆಯಿಂದ ಹೊರನಡೆದಿದ್ದರು.
ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಬೋಯಿಂಗ್ 787-8 ವಿಮಾನ ಪತನಗೊಂಡ ಘಟನೆ ಬಳಿಕ ವಿಲ್ಸನ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ದುರಂತದಲ್ಲಿ ವಿಮಾನದಲ್ಲಿದ್ದ 242 ಮಂದಿಯಲ್ಲಿ 241 ಮಂದಿ ಸಾವನ್ನಪ್ಪಿದ್ದರು.
