ಬೆಂಗಳೂರು, ಡಿ.27- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿಗೆ ಭದ್ರಕೋಟೆ ಮಾತ್ರವಲ್ಲದೆ ಸುಭದ್ರ ಕೋಟೆ ಎಂಬುದನ್ನು ಸಾಬೀತು ಮಾಡುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಪಕ್ಷದ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಯಾವಾಗಲೂ ಭದ್ರಕೋಟೆ, ಇದನ್ನು ಈ ಬಾರಿ ಸುಭದ್ರ ಕೋಟೆಯನ್ನಾಗಿ ಪರಿವರ್ತನೆ ಮಾಡುತ್ತೇವೆ ಎನ್ನುವ ಮೂಲಕ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಕರ್ನಾಟಕದಿಂದ ಹೆಚ್ಚು ಸ್ಥಾನ ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಸೌಭಾಗ್ಯ ಎಂದರೆ ಮೂರನೇ ಬಾರಿಗೆ ಮೋದಿಯವರು ಪ್ರಧಾನಿಯಾಗುವ ಸಂದರ್ಭದಲ್ಲಿ ನಮಗೆ ಜವಾಬ್ದಾರಿ ಸಿಕ್ಕಿದೆ. ಅಂತಹ ಕಾಲಘಟ್ಟದಲ್ಲಿ ನಾವು ಅಧಿಕಾರ ತೆಗೆದುಕೊಂಡಿದ್ದೇವೆ. ಪಕ್ಷ ಯಾವ ಸೂಚನೆಯನ್ನು ನೀಡುತ್ತದೆಯೋ ಅದರಂತೆ ಕಾರ್ಯತಂತ್ರ ರೂಪಿಸುತ್ತೇವೆ ಎಂದರು.
ದೀದಿ ಸರ್ಕಾರಕ್ಕಿಂತ ಎಡಪಕ್ಷಗಳ ಆಡಳಿತ ಉತ್ತಮವಾಗಿತ್ತು : ಅಮಿತ್ ಶಾ
ಪಕ್ಷದ ವರಿಷ್ಠರು ನಮ್ಮ ಮೇಲೆ ಹೆಚ್ಚಿನ ವಿಶ್ವಾಸವಿಟ್ಟುಕೊಂಡು ಜವಾಬ್ದಾರಿಯನ್ನು ನೀಡಿದ್ದೇವೆ. ಯಾವ ಕಾಲಘಟ್ಟದಲ್ಲಿ ಹೊಣೆಗಾರಿಕೆ ಸಿಕ್ಕಿದೆ ಎಂಬುದು ಬಹಳ ಮುಖ್ಯ. ಅದನ್ನು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಕನಸನ್ನು ನನಸು ಮಾಡುವ ಗುರಿ ತಮ್ಮ ಮುಂದೆ ಇದೆ ಎಂದು ಹೇಳಿದರು.ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಶತಕೋಟಿ ಭಾರತೀಯರ ಕನಸಾಗಿತ್ತು.
ಅದು ಇಂದು ನನಸಾಗುವ ಹಂತಕ್ಕೆ ಬಂದಿದೆ. ಮೋದಿಯವರ ಕಾಲಘಟ್ಟದಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಇಂತಹ ಕಾಲಘಟ್ಟದಲ್ಲಿ ನಾನು ಪಕ್ಷದ ಸಾರಥ್ಯ ವಹಿಸಿಕೊಂಡಿರುವುದು ಪೂರ್ವಜನ್ಮದ ಪುಣ್ಯ. ಕಾರ್ಯಕರ್ತರ ಪರಿಶ್ರಮದಿಂದ ಈ ಬಾರಿ ನಾವು ಹೆಚ್ಚಿನ ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಜಯೇಂದ್ರ ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪಕ್ಷದ ಕಚೇರಿಗೆ ಆಗಮಿಸಿದ ವಿಜಯೇಂದ್ರ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ನೂತನ ಪದಾಧಿಕಾರಿಗಳ ಕಚೇರಿಯಲ್ಲಿ ಆರತಿ ಎತ್ತಿ ಬರಮಾಡಿಕೊಳ್ಳಲಾಯಿತು.