ಬೆಂಗಳೂರು, ಅ.1- ತಮ್ಮದು ಜಾತ್ಯತೀತ ಸರ್ಕಾರ, ಎಲ್ಲಾ ಜಾತಿಗಳನ್ನೂ ಸಮಾನವಾಗಿ ಕಾಣುವುದು ನಮ್ಮ ಆದ್ಯತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‍ನ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರು ಸರ್ಕಾರದಲ್ಲಿ ಲಿಂಗಾಯಿತರಿಗೆ ಅನ್ಯಾಯವಾಗುತ್ತಿದೆ ಎಂದು ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯನವರು, ತಮ್ಮ ಸರ್ಕಾರ ಯಾವ ಸಮುದಾಯದೊಂದಿಗೂ ತಾರತಮ್ಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮದು ಜಾತ್ಯತೀತ ಸರ್ಕಾರ. ಯಾರಿಗೂ ಅನ್ಯಾಯ ಮಾಡುವುದಿಲ್ಲ. ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಜಾರಿಗೊಳಿಸಿರುವ ಅನೇಕ ಕಾರ್ಯಕ್ರಮಗಳು ಜಾತ್ಯತೀತವಾಗಿವೆ. ನಾವು ಜಾತಿ ರಾಜಕಾರಣ ಮಾಡುವುದಿಲ್ಲ. ಎಲ್ಲಾ ಸಮುದಾಯದವರನ್ನೂ ಸಮಾನವಾಗಿ ಕಾಣುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ
ಇನ್ನೂ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ. ನಾನೇ ಮುಖ್ಯಮಂತ್ರಿಯಾಗುತ್ತೇನೆಂದು ಕುಮಾರಸ್ವಾಮಿ ಭ್ರಮೆಯಲ್ಲಿದ್ದರು. ಈಗ ಭ್ರಮಾನಿರಸರಾಗಿದ್ದಾರೆ. ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಾಪ ಅವರು ಅದೇ ಭ್ರಮೆಯಲ್ಲಿರಲಿ ಎಂದು ತಿರುಗೇಟು ನೀಡಿದರು.
ಜೆಡಿಎಸ್‍ನಲ್ಲಿ ಅಸಮಾಧಾನ ಹೊಂದಿರುವ ಸಿ.ಎಂ.ಇಬ್ರಾಹಿಂ ಅವರಿಗೆ ಕಾಂಗ್ರೆಸ್ ಸೇರುವಂತೆ ಹಲವು ನಾಯಕರು ಆಹ್ವಾನ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮುಖ್ಯಮಂತ್ರಿಯವರು, ಇಬ್ರಾಹಿಂ ಅವರನ್ನೇ ಕೇಳಿ ಎಂದು ಮಾರ್ನುಡಿದರು.