ಟೆಹ್ರಾನ್, ಏ.9- ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಬಳಿಕ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯು ಹಾರ್ಮುಜ್ ಜಲಸಂಧಿಯಮೂಲಕ ಹಾದುಹೋಗುವ ಹಡಗುಗಳಿಗಾಗಿ ಎರಡು ಹೊಸ ಪರ್ಯಾಯ ಮಾರ್ಗಗಳನ್ನು ಘೋಷಿಸಿದೆ.
ಹಾರ್ಮುಜ್ ಜಲಸಂಧಿಯ ಸಾಮಾನ್ಯ ಹಡಗು ಸಂಚಾರದ ಮಾರ್ಗದಲ್ಲಿ ಬಾಂಬ್ ಹಾಕಿದ್ದರಿಂದ ಆ ಮಾರ್ಗದಲ್ಲಿ ಚಲಿಸುವುದು ಸಾಧ್ಯವಿಲ್ಲ. ಈ ಕಾರಣಕ್ಕೆ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಹೊಸ ಮಾರ್ಗಗಳನ್ನು ರೂಪಿಸಲಾಗಿದೆ ಎಂದು ಅದು ತಿಳಿಸಿದೆ.
ಈ ಹೊಸ ಮಾರ್ಗಗಳು ಹಡಗುಗಳನ್ನು ಇರಾನ್ನ ಲಾರಕ್ ದ್ವೀಪದ ಸಮೀಪವಿರುವ ನೀರಿನ ಮೂಲಕ ಹಾದುಹೋಗುವಂತೆ ಮಾಡುತ್ತವೆ. ಹಡಗುಗಳು ಒಮನ್ ಸಮುದ್ರದಿಂದ ಲಾರಕ್ ದ್ವೀಪದ ಉತ್ತರ ಭಾಗದ ಕಡೆಗೆ ಪ್ರವೇಶಿಸಬೇಕು. ಪರ್ಷಿಯನ್ ಕೊಲ್ಲಿಯಿಂದ ಲಾರಕ್ ದ್ವೀಪದ ದಕ್ಷಿಣ ಭಾಗದ ಮೂಲಕ ಒಮಾನ್ ಸಮುದ್ರದ ಕಡೆಗೆ ನಿರ್ಗಮಿಸಬೇಕು ಎಂದು ಸೂಚಿಸಿದೆ.
ಈ ಮಾರ್ಗಗಳಲ್ಲಿ ಸಂಚರಿಸುವ ಎಲ್ಲಾ ಹಡಗುಗಳು ನೌಕಾಪಡೆಯೊಂದಿಗೆ ನೇರ ಸಮನ್ವಯ ಸಾಧಿಸುವುದು ಕಡ್ಡಾಯವಾಗಿದೆ.
ವರದಿಗಳ ಪ್ರಕಾರ ಈ ಮಾರ್ಗಗಳನ್ನು ಬಳಸುವ ಹಡಗುಗಳಿಗೆ ಕ್ರಿಪ್ಟೋಕರೆನ್ಸಿ ಅಥವಾ ಚೀನೀ ಯುವಾನ್ನಲ್ಲಿ ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
