Homeರಾಜ್ಯವಾಣಿಜ್ಯ ಲಾಭದ ಕಾರಣ ಐಪಿಎಲ್‌ ಸ್ಥಳಾಂತರ : ಗೃಹ ಸಚಿವ ಪರಮೇಶ್ವರ್‌

ವಾಣಿಜ್ಯ ಲಾಭದ ಕಾರಣ ಐಪಿಎಲ್‌ ಸ್ಥಳಾಂತರ : ಗೃಹ ಸಚಿವ ಪರಮೇಶ್ವರ್‌

IPL shifted due to commercial gains: Home Minister Parameshwara

ಬೆಂಗಳೂರು, ಮೇ 7- ಬಿಜೆಪಿಯವರು ಎಷ್ಟು ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬುದನ್ನು ಹೇಳದೆ, ಜಾಣ ಕುರುಡರಂತೆ ವರ್ತಿಸಿ, ಕಾಂಗ್ರೆಸ್‌‍ ಬಗ್ಗೆ ಟೀಕೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಜನಪರ ಸರ್ಕಾರ ರಚನೆಯಾಗಲು ಟಿವಿಕೆಗೆ ಬೆಂಬಲ ನೀಡುತ್ತಿದ್ದೇವೆ. ಚರಾಜಕೀಯ ಸಾಧ್ಯತೆಗಳ ಕಲೆ ಎಂದು ಹೇಳಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್‌‍ ಟಿ.ಡಿ.ರಾಜೇಗೌಡ ಅವರು ಚುನಾವಣಾ ಆಯೋಗಕ್ಕೆ ದೂರು ನೀಡುವುದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದು ಸೇರಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ಹೀಗಾಗಲೇ ಮತಪತ್ರಗಳನ್ನು ತಿರುಚಲಾಗಿದೆ ಎಂದು ರಾಜೇಗೌಡ ಖಾಸಗಿ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಾಗಿದೆ. ವಿಚಾರಣೆ ನಡೆದು ಅದು ಸಾಬೀತಾದರೆ, ಫಲಿತಾಂಶ ಮತ್ತೆ ಬೇರೆ ರೀತಿಯಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನಿಂದ ಐಪಿಎಲ್‌ ಪಂದ್ಯಾವಳಿ ಅಹಮದಾಬಾದ್‌ಗೆ ಸ್ಥಳಾಂತರಗೊಳ್ಳಲು ವಾಣಿಜ್ಯ ಲಾಭದ ಕಾರಣಗಳಿವೆ. ಭದ್ರತೆ ವಿಚಾರವಾಗಿ ಯಾವುದೇ ಆಕ್ಷೇಪಣೆಗಳಿಲ್ಲ. ಈವರೆಗೂ ನಡೆದಿರುವ 5 ಪಂದ್ಯಾವಳಿಗಳಿಗೆ ಭದ್ರತೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಐಪಿಎಲ್‌, ಆರ್‌ಸಿಬಿ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಸೇರಿದಂತೆ ಯಾವುದೇ ಸಂಸ್ಥೆಗಳು ಭದ್ರತೆಗೆ ಸಂಬಂಧಪಟ್ಟಂತೆ ಆಕ್ಷೇಪಣೆೆ ವ್ಯಕ್ತಪಡಿಸಿಲ್ಲ ಎಂದರು.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 33 ಸಾವಿರ ಆಸನ ವ್ಯವಸ್ಥೆಗಳಿವೆ. ಅದರಲ್ಲಿ ಅತೀ ಗಣ್ಯರು, ಪ್ರಾಯೋಜಕತ್ವದ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಆಟಗಾರರ ಕುಟುಂಬ ಸೇರಿ ಸುಮಾರು 7 ರಿಂದ 8 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ಕೊಡಬೇಕಾಗುತ್ತದೆ. 25 ಸಾವಿರ ಟಿಕೆಟ್‌ಗಳು ಉಳಿಯುತ್ತಿದ್ದು, ವಾಣಿಜ್ಯೋದ್ದೇಶದಿಂದ ಇದು ಲಾಭವಾಗುವುದಿಲ್ಲ. ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಒಂದು ಲಕ್ಷ ಆಸನ ವ್ಯವಸ್ಥೆ ಇದೆ. ಅಲ್ಲಿ ಪಂದ್ಯಾವಳಿ ನಡೆದರೆ ಲಾಭದಾಯಕ ಎಂಬ ಕಾರಣಕ್ಕೆ ಸ್ಥಳಾಂತರ ಮಾಡುತ್ತಿರುವುದಾಗಿ ಅನಧಿಕೃತವಾಗಿ ತಿಳಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಹಿಂದಿನ ಸರಣಿಯಲ್ಲಿ ಗೆದ್ದ ತಂಡದ ತವರಿನಲ್ಲಿ ಮೊದಲ ಹಾಗೂ ಪ್ರಸ್ತುತ ಸರಣಿಯಲ್ಲಿ ಫೈನಲ್‌ಗೆ ಬಂದ ತಂಡಕ್ಕೆ ಸೇರಿದ ಊರಿನಲ್ಲಿ ಕೊನೆಯ ಪಂದ್ಯಾವಳಿ ಆಯೋಜಿಸುವುದು ಬಿಸಿಸಿಐನ ನಿಯಮಾವಳಿಯಲ್ಲಿದೆ. ಆದರೆ ಈ ಬಾರಿ ಅದನ್ನು ಲಾಭದ ಕಾರಣಕ್ಕಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ ಎಂದರು.

ಡಿಜಿಪಿ ರಾಮಚಂದ್ರ ರಾವ್‌ ಅವರ ಅಮಾನತು ಹಿಂಪಡೆದಿರುವುದನ್ನ ಪರಮೇಶ್ವರ್‌ ಸಮರ್ಥಿಸಿಕೊಂಡರು. ಇಲ್ಲಿ ಸರಿ ತಪ್ಪುಗಳ ವಿಚಾರ ಪ್ರಮುಖ ಅಲ್ಲ. ರಾಮಚಂದ್ರ ರಾವ್‌ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿದ್ದಾರೆ. ಅವರಿಗೆ ಪಿಂಚಣಿ ಹಾಗೂ ಇತರ ಭತ್ಯೆಗಳು ಇತ್ಯರ್ಥವಾಗಬೇಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ರಾಮಚಂದ್ರರಾವ್‌ ಮನವಿ ಮಾಡಿದ್ದರು. ತನಿಖೆಗೆ ತಾವು ಸಹಕರಿಸುತ್ತೇನೆ. ಅದರಲ್ಲಿ ಯಾವುದೇ ರೀತಿಯ ಅಭಿಪ್ರಾಯ ಬಂದರೂ ಅದನ್ನು ಒಪ್ಪಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮತಿಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಮಾನತ್ತನ್ನು ಹಿಂಪಡೆದಿದೆ ಎಂದು ತಿಳಿಸಿದರು.

ಪಶ್ಚಿಮಬಂಗಾಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಸುವೇಂದು ಆಧಿಕಾರಿ ಆಪ್ತನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗಳಲ್ಲಿ ಈ ರೀತಿಯ ಘಟನೆಗಳು ಸಾಮಾನ್ಯ. ಆದರೆ ಇಂತಹ ದುಷ್ಕೃತ್ಯಗಳು ನಡೆಯಬಾರದು. ಚುನಾವಣಾ ಆಯೋಗ ಅಗತ್ಯ ಬಿಗಿಭದ್ರತೆ ಕೈಗೊಳ್ಳಬೇಕು ಎಂದರು.

RELATED ARTICLES

Latest News