ಟೆಲ್ ಅವಿವ್, ಏ.9- ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದರು ಇಸ್ರೇಲ್ಗೆ ಲೆಬನಾನ್ ಮೇಲಿನ ಕೋಪ ತಣ್ಣಗಾಗಿಲ್ಲ. ಹೀಗಾಗಿ ಕೇವಲ 10 ನಿಮಿಷಗಳಲ್ಲಿ ಇಸ್ರೇಲ್ ವಾಯುಪಡೆ ಲೆಬನಾನ್ ಮೇಲೆ 100 ಕ್ಷಿಪಣಿ ದಾಳಿ ನಡೆಸಿದೆ. ಇದನ್ನು ಈ ಯುದ್ಧದ ಅತ್ಯಂತ ದೊಡ್ಡ ಸಂಘಟಿತ ದಾಳಿ ಎಂದು ಇಸ್ರೇಲ್ ಹೇಳಿಕೊಂಡಿದೆ.
ರಾಜಧಾನಿ ಬೈರೂತ್ ಮಧ್ಯಭಾಗ, ಬೆಕಾ ವ್ಯಾಲಿ ಮತ್ತು ದಕ್ಷಿಣ ಲೆಬನಾನ್ನ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳು ಹಾಗೂ ಶಸ್ತ್ರಾಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.
ಲೆಬನಾನ್ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಈ ಭೀಕರ ದಾಳಿಯಲ್ಲಿ ಕನಿಷ್ಠ 254 ಜನರು ಸಾವನ್ನಪ್ಪಿದ್ದಾರೆ ಮತ್ತು 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿವುದು ವಿಶೇಷ. ಲೆಬನಾನ್ ಮೇಲಿನ ಕಾರ್ಯಾಚರಣೆಗೆ ಈ ಕದನ ವಿರಾಮ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
