ಕೋಲ್ಕತ್ತಾ, ಮೇ.7- ನಾಳೆ ನಮ ಸರ್ಕಾರ ರಚನೆಯಾಗುತ್ತಿದ್ದಂತೆ ಟಿಎಂಸಿ ಗೂಂಡಾಗಳನ್ನು ಮಟ್ಟ ಹಾಕುವುದಾಗಿ ಬಿಜೆಪಿ ಪಕ್ಷದ ನಾಯಕ ಸುವೇಂದು ಅಧಿಕಾರಿ ಗುಟುರು ಹಾಕಿದ್ದಾರೆ. ನನ್ನ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆ ಪೂರ್ವನಿಯೋಜಿತ, ಎರಡು-ಮೂರು ದಿನಗಳಿಂದ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ನಿನ್ನೆ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ಪ್ರದೇಶದ ದೊಹರಿಯಾದಲ್ಲಿ 41 ವರ್ಷದ ಚಂದ್ರನಾಥ್ ರಥ್ ಅವರು ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಚು ರೂಪಿಸಿದ್ದ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರಥ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿ ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ತಮ್ಮ ಆಪ್ತ ಸಹಾಯಕರನ್ನು ಕಳೆದುಕೊಂಡ ಆಘಾತದಲ್ಲಿರುವ ಸುವೇಂದು ಅಧಿಕಾರಿ, ಇದೊಂದು ನಿರ್ದಯ ಮತ್ತು ಪೂರ್ವ ಯೋಜಿತ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಹಂತಕರು ಕಳೆದ 2-3 ದಿನಗಳಿಂದ ರಥ್ ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು . ಕೊಲೆಗೆ ಸಂಪೂರ್ಣ ಸ್ಕೆಚ್ ಹಾಕಲಾಗಿತ್ತು ಎಂದಿದ್ದಾರೆ.
ಬಂಗಾಳ ಪೊಲೀಸ್ ಮಹಾನಿರ್ದೇಶಕರು ಕೂಡ ಇದು ಯೋಜಿತ ಕೃತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಸುವೇಂದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು. ಇದು ಟಿಎಂಸಿಯ ಮಹಾಜಂಗಲ್ ರಾಜ್ಗೆ ಸಾಕ್ಷಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಅಪರಾಧಿಗಳನ್ನು ನಿರ್ನಾಮ ಮಾಡುವುದು ಖಚಿತ. ಅಲ್ಲಿಯವರೆಗೆ ನಮ ಕಾರ್ಯಕರ್ತರು ಸಮಾಧಾನದಿಂದಿರಬೇಕು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಹತ್ಯೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಸಚಿವೆ ಸುಕಾಂತ ಮಜುಂದಾರ್ ಈಗಾಗಲೇ ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಪೊಲೀಸರು ಘಟನಾ ಸ್ಥಳದಲ್ಲಿ ಕೆಲವು ಪ್ರಮುಖ ಪುರಾವೆಗಳನ್ನು ಸಂಗ್ರಹಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
