Thursday, April 16, 2026
Homeರಾಜ್ಯಜನತಾ ಸಮಾವೇಶದ ಮೂಲಕ ಪಕ್ಷದ ಬೆಳ್ಳಿಹಬ್ಬ ಆಚರಿಸಿ ಶಕ್ತಿ ಪ್ರದರ್ಶನ ಮಾಡಿದ ಜೆಡಿಎಸ್‌‍

ಜನತಾ ಸಮಾವೇಶದ ಮೂಲಕ ಪಕ್ಷದ ಬೆಳ್ಳಿಹಬ್ಬ ಆಚರಿಸಿ ಶಕ್ತಿ ಪ್ರದರ್ಶನ ಮಾಡಿದ ಜೆಡಿಎಸ್‌‍

JDS celebrates party's silver jubilee with a show of strength at Janata Samavesha

ಬೆಂಗಳೂರು,ಏ.11- ನಗರದ ಹೊರವಲಯದ ಕೊಮಘಟ್ಟದ ಬಳಿಯ ಮೈದಾನದಲ್ಲಿ ಇಂದು ಜೆಡಿಎಸ್‌‍ ಜನತಾ ಸಮಾವೇಶ ಹಾಗೂ ಪಕ್ಷದ ಬೆಳ್ಳಿಹಬ್ಬ ಆಚರಣೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿತು. ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಟೀಕಿಸುವವವರಿಗೆ ಉತ್ತರವಾಗಿ ಈಗಾಗಲೇ ಹಾಸನ ಮತ್ತು ವಿಜಯಪುರದಲ್ಲಿ ಯಶಸ್ವಿ ಸಮಾವೇಶಗಳನ್ನು ನಡೆಸಿತ್ತು.
ಅದೇ ರೀತಿ ಬೆಂಗಳೂರಿನಲ್ಲೂ ಜೆಡಿಎಸ್‌‍ ನೆಲೆ ಭದ್ರವಾಗಿದೆ ಎಂಬುದನ್ನು ಸಾಬೀತುಪಡಿಸಲು ಬೃಹತ್‌ ಸಮಾವೇಶವನ್ನು ಇಂದು ನಡೆಸಿತು.

ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹಾಗೂ ಬಡಾವಣೆಗಳಿಂದ ಜೆಡಿಎಸ್‌‍ ಕಾರ್ಯಕರ್ತರು ಸಮಾವೇಶಕ್ಕೆ ತಂಡೋಪತಂಡವಾಗಿ ಆಗಮಿಸಿದರು.ಮುಂಬರುವ ಜಿಬಿಎ ವ್ಯಾಪ್ತಿಯ ನಗರಪಾಲಿಕೆ ಚುನಾವಣೆಗೆ ಸಜ್ಜಾಗುವಂತೆ, ಪಕ್ಷದ ಸಂಘಟನೆಯನ್ನು ಚುರುಕುಗೊಳಿಸುವುದು, ಸದಸ್ಯತ್ವ ನೋಂದಣಿ ಹೆಚ್ಚಿಸುವುದಕ್ಕೆ ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ಸಲಹೆ ಮಾಡಿದರು.
ರಾಜ್ಯಸರ್ಕಾರದ ವೈಫಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಜನಪರ ಹೋರಾಟಗಳನ್ನು ಹಮಿಕೊಳ್ಳುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರ ಅಧಿಕಾರವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಬಣ್ಣಿಸಲಾಯಿತು.

ಬೆಂಗಳೂರಿಗೆ ಕಾವೇರಿ ನೀರು ಒದಗಿಸಿರುವುದು, ಸಂಚಾರ ದಟ್ಟಣೆ ತಗ್ಗಿಸಲು ಮೇಲ್ಸೇತುವೆ ಪ್ರಾರಂಭಿಸಿರುವುದು, ಮೆಟ್ರೋ ಯೋಜನೆಗೆ ಚಾಲನೆ ಸೇರಿದಂತೆ ಹಲವು ಮಹತ್ವದ ಕೊಡುಗೆಗಳನ್ನು ನೀಡಲಾಗಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರು ನೀಡಿರುವ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡಿ ವಿಶ್ವಾಸ ಗಳಿಸಲು ಕಾರ್ಯಕರ್ತರಿಗೆ ಕರೆ ನೀಡಲಾಯಿತು.

ಕಾಂಗ್ರೆಸ್‌‍ ಹಾಗೂ ರಾಜ್ಯಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಕ್ಷದ ನಾಯಕರು, ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌‍ ಅನ್ನು ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಲು ಸೂಚಿಸಲಾಯಿತು.
ಇದೇ ರೀತಿ ರಾಜ್ಯದ ವಿವಿಧೆಡೆ ಸಮಾವೇಶಗಳನ್ನು ನಡೆಸಿ ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸರ್ವರೀತಿಯಲ್ಲಿ ಸಜ್ಜುಗೊಳಿಸುವುದಾಗಿ ಪ್ರಕಟಿಸಲಾಯಿತು.

ಜೆಡಿಎಸ್‌‍ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಕೋರ್‌ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಜಿಬಿಎ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಸೇರಿದಂತೆ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ವಿವಿಧ ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

RELATED ARTICLES

Latest News