Saturday, November 23, 2024
Homeಸಂಪಾದಕೀಯ-ಲೇಖನಗಳುಯುಗದಕವಿ, ಜಗದಕವಿ, ರಸಋಷಿ, ರಾಷ್ಟ್ರಕವಿ ಕುವೆಂಪು

ಯುಗದಕವಿ, ಜಗದಕವಿ, ರಸಋಷಿ, ರಾಷ್ಟ್ರಕವಿ ಕುವೆಂಪು

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕನ್ನಡ..ಕನ್ನಡ..ಆ..ಸವಿ ಕನ್ನಡ..

ಎಂದು ಕನ್ನಡಿಗರನ್ನು ಸಾಹಿತ್ಯದಲೆಗಳ ಮೇಲೆ ತೇಲುವಂತೆ ಮಾಡಿದ ಶಬ್ಧಮಾಂತ್ರಿಕ. ಕರುನಾಡಿಗೆ ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂಬ ನಾಡಗೀತೆಯ ಪದಪುಂಜಗಳಿಂದ ಕನ್ನಡಮಾತೆಗೆ ಶಬ್ಧಾರ್ಚನೆ ಮಾಡಿದ ಸಹ್ಯಾದ್ರಿ ಸಾಲ ಕವಿಕುಲೋತ್ತಮ ಕುವೆಂಪು, ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ.

ಕುವೆಂಪು ಅವರು ಕನ್ನಡ ನಾಡಿನ ಹೆಮ್ಮೆಯ ರಸ ಕವಿ, ಋಷಿ ಕವಿ, ರಾಷ್ಟ್ರ ಕವಿ ಕನ್ನಡದ ಮತ್ತೋರ್ವ ವರ ಕವಿಗಳಾದ ಬೇಂದ್ರೆಯವರಿಂದಲೇ ಯುಗದ ಕವಿ,ಜಗದ ಕವಿ ಎಂದು ಕೀರ್ತಿತರಾಗಿದ್ದಂತಹವರು. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್‍ಚೇತನ.

ಕುವೆಂಪು ಒಬ್ಬ ದಾರ್ಶನಿಕ ಲೇಖಕರು. ವರ್ತಮಾನದ ನಿತ್ಯವನ್ನೂ, ತ್ರಿಕಾಲದ ಭವ್ಯವನ್ನೂ, ಭೂಮವನ್ನೂ, ಅಲ್ಪವನ್ನೂಒಂದು ಪೂರ್ಣದೃಷ್ಟಿಯಲ್ಲಿ ಒಳಗೊಳ್ಳಲು ಪ್ರಯತ್ನಿಸಿದ ತಪಸ್ವಿಗಳು. ಕಾಡಿನ ಕೊಳಲಿದು, ಕಾಡಕವಿಯು ನಾ, ನಾಡಿನ ಜನರೊಲಿದಾಲಿಪುದು ಎಂಬ ಭಿನ್ನಹದೊಂದಿಗೆ ಕಳೆದ ಶತಮಾನದ ಮೂರನೆ ದಶಕದಲ್ಲಿ ಕನ್ನಡ ನವೋದಯವನ್ನು ಪ್ರವೇಶಿಸಿದ ಈ ಕಾಡಿನ ಕವಿ ಅನಂತರ ನಾಡಿನ ಕವಿಯಾಗಿ ಕುವೆಂಪು ಎಂಬ ಮೂರಕ್ಷರದಿಂದಲೇ ಕನ್ನಡಿಗರ ಮನೆ ಮಾತಾದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಹೊಸಗನ್ನಡ ಸಾಹಿತ್ಯದ ಹಿರಿಯ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ, ಕನ್ನಡದ ಮಹಾನ್‍ಚೇತನ.

ಬಾಲ್ಯಜೀವನದ ಕಂಪು: ಕುವೆಂಪು ಅವರು ಹುಟ್ಟಿದ್ದು 29 ಡಿಸೆಂಬರ್ 1904, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ. ತಂದೆ ವೆಂಕಟಪ್ಪಗೌಡರು, ತಾಯಿ ಸೀತಮ್ಮ. ಆದರೆ ಕುವೆಂಪು ಅವರು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೊಡಿಗೆ ಗ್ರಾಮದಲ್ಲಿ. ಮಲೆನಾಡಿನ ಮಡಿಲಿನಲ್ಲಿ ಹುಟ್ಟಿ ಬೆಳೆದ ಕುವೆಂಪು ಅವರು ಶಾಲೆ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ವಿಷಯವನ್ನು ಕಲಿಸಿದ್ದು ಮಲೆನಾಡಿನ ಪ್ರಕೃತಿ. ಹೀಗಾಗಿ ಅವರ ಎಲ್ಲಾ ಕೃತಿಗಳಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತದೆ.

ಓದುವಾಗಲೇ ಕವಿ ಹೃದಯ: ಎಸ್.ಎಸ್.ಎಲ್.ಸಿ. ಓದುವಾಗಲೇ ಕುವೆಂಪು ಅವರು ಬರೆದಿದ್ದ ಬಿಗಿನರ್ಸ್ ಮ್ಯೂಸ್ ಎಂಬ ಇಂಗ್ಲಿಷ್ ಕವನ ಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಷ್ ಕವಿ ಜೆ.ಹೆಚ್.ಕಸಿನ್ಸ್‍ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪು ಅವರು ಬರೆದ ಮೊದಲ ಕನ್ನಡ ಕವನ ಸಂಕಲನ ಅಮಲನ ಕಥೆ ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪು ಅವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ.

ಮಹಾಮಹಿಮರ ಮಾರ್ಗದರ್ಶನ: ಜತೆಗೆ ನಾಡು ಕಂಡ ೀಮಂತರಾದ ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ.ಶ್ರೀ, ಎ.ಆರ್.ಕೃಷ್ಣಶಾಸ್ತ್ರಿ ಅವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. 1925ರಲ್ಲಿ ಪ್ರಕಟವಾದ ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಿಜೋಗಿ ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿಯಾಗಿದ್ದ ಕುವೆಂಪು ಅವರಿಗೆ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಅರಸಿ ಬಂತು.

ವಿಶ್ವಮಾನವ ಸಂದೇಶ: ಕುವೆಂಪು ತಮ್ಮ ಬದುಕಿನ ಸಂದೇಶವೆಂದು ವಿಶ್ವಮಾನವನ ಪರಿಕಲ್ಪನೆಯೊಂದನ್ನು ಮಂಡಿಸಿದವರು. ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಇದನ್ನು ಕಾರ್ಯಗತಗೊಳಿಸಲು ಅಗತ್ಯವಾದ ಸಪ್ತ ಸೂತ್ರಗಳನ್ನು ಮಂಡಿಸುತ್ತಾ ಮನುಷ್ಯಜಾತಿ ತಾನೊಂದೇ ವಲಂ ಎಂಬ ಕವಿ ಪಂಪನ ಸೂತ್ರವನ್ನು ನಿರುಪಾಕವಾಗಿ ಸ್ವೀಕರಿಸಬೇಕು ಎನ್ನುತ್ತಾರೆ ಕುವೆಂಪು. ಆದರೆ ಮನುಷ್ಯ ಮನುಷ್ಯನಾಗಿ ಬದುಕುವುದೇ ಸಾಧ್ಯವಾಗದಂತಹ ವಿದ್ಯಮಾನಗಳು ಸಂಭವಿಸುತ್ತಿರುವ ಈ ಹೊತ್ತಿನಲ್ಲಿ ಅನೇಕ ವಿಚ್ಛಿದ್ರಕಾರಕ ಶಕ್ತಿಗಳಿಂದ ಮನುಷ್ಯತ್ವವೇ ಚೂರುಚೂರಾಗುತ್ತಿರುವ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವ ಕಲ್ಪನೆ ಒಂದು ದೂರದ, ಎತ್ತರದ ಬೆಳಕು ಮಾತ್ರ.

ಕಾಡು ಕವಿ: ಪಂಪನಿಗೆ ಧರ್ಮ ಮತ್ತು ಕಾವ್ಯಧರ್ಮ ಹೇಗೆ ಬೇರೆ ಬೇರೆಯಾಗಿರಲಿಲ್ಲವೋ ಹಾಗೆಯೇ ಕುವೆಂಪು ಅವರಿಗೆ ಪ್ರಕೃತಿ ಮತ್ತು ಕಾವ್ಯ ಪ್ರಕೃತಿ ಬೇರೆ ಬೇರೆಯಾಗಿರಲಿಲ್ಲ. ಕಣ್ಣಿಗೆ ಕಾಣುವ ಪ್ರಕೃತಿ ಹಾಗೂ ಕಣ್ಣಿಗೆ ಕಾಣದ ಪ್ರಕೃತಿಗಳ ಅಂತರ ಸಂಬಂಧವನ್ನು, ಅಂತರ ವಿರೋಧವನ್ನು ತಮ್ಮ ಕೃತಿಗಳಲ್ಲಿ ಅನುಸಂಧಾನ ಮಾಡುತ್ತಾರೆ. ಕಾಡಿನ ರುದ್ರ ಭೀಕರತೆಯನ್ನು, ಸೌಮ್ಯ ಸೌಂದರ್ಯವನ್ನು ತಮ್ಮ ಪಾತ್ರಗಳ, ವ್ಯಕ್ತಿತ್ವಗಳ ಬೆಳವಣಿಗೆಗೆ ಭಿತ್ತಿಯಾಗಿ ಬೆಳೆಸುತ್ತಾರೆ. ಕಾಡಿನ ಮಹತ್ವ, ಪ್ರಕೃತಿಯ ಅನಂತತೆಯನ್ನು ಸಾರುತ್ತಾರೆ. ಪ್ರಕೃತಿ ತನಗೋಸ್ಕರ ಇದೆ ಎಂಬ ಯಜಮಾನ ಧೋರಣೆಯನ್ನು ಖಂಡಿಸಿ ತಾನು ಅದರ ಒಂದು ಭಾಗ ಮಾತ್ರ ಎಂಬುದನ್ನು ಮನದಟ್ಟಾಗಿಸಿ ಮನುಷ್ಯ ಸಾಧ್ಯತೆಗಳ ಮಿತಿಯನ್ನು ತೋರಿಸುವುದು ಕುವೆಂಪು ಅವರ ಉದ್ಧೇಶವಾಗಿದೆ.

ಕುವೆಂಪು ತಮ್ಮ ಎರಡು ಕಾದಂಬರಿಗಳಲ್ಲೂ ಮಲೆನಾಡಿನ ಬದುಕನ್ನು ಚಿತ್ರಿಸಿದ್ದಾರೆ. ಹೀಗೆ ಚಿತ್ರಿಸುವಾಗ ಇದು ಸೌಂದರ್ಯ ವರ್ಣನೆ, ಇದು ಕಾಡಿನ ವರ್ಣನೆ, ಇದು ಸಂಪ್ರದಾಯದ ವರ್ಣನೆ ಎಂದೇನು ವಿಭಾಗಿಸಿಲ್ಲ. ಕುವೆಂಪು ಸಾಹಿತ್ಯದಲ್ಲಿ ಪರಿಸರ ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವುದು ಅಲ್ಲಿನ ಮರ-ಗಿಡ ಬಳ್ಳಿಗಳು, ನದಿ-ತೊರೆಗಳು, ಬೆಟ್ಟ-ಗುಡ್ಡಗಳು, ಪ್ರಾಣಿ-ಪಕ್ಷಿಗಳು, ಇನ್ನಿತರ ಸಂಗತಿಗಳನ್ನು ಹೇಗೆ ವರ್ಣಿಸಿದ್ದಾರೆ ಎಂಬುದು ಬೇರೆಲ್ಲಾ ಅವರ ಕೃತಿಗಳಿಗಿಂತ ಕಾದಂಬರಿಗಳಲ್ಲಿ ಇವೆಲ್ಲದರ ವರ್ಣನೆ ಹೆಚ್ಚಾಗಿಯೂ ಇದೆ.
ಕುವೆಂಪು ಅವರ ಎರಡು ಕಾದಂಬರಿಗಳಲ್ಲಿ ಬರುವ ಪರಿಸರ ಚಿತ್ರಣ, ಕಾಡು, ಗಿಡ, ಮರ, ಬೆಟ್ಟ-ಗುಡ್ಡಕ್ಕೆ ಮೀಸಲಿಲ್ಲ. ಅಜ್ಞಾನ, ಮೂಢನಂಬಿಕೆ, ಶೋಷಣೆ ಇವೆಲ್ಲವುಗಳಿಂದ ಮುಕ್ತವಾಗಿ ಬದುಕಲಿಕ್ಕೆ ಬೇಕಾದ ಸಹನೀಯ ವಾತಾವರಣ ನಿರ್ಮಿಸುವುದಾಗಿದೆ. ಒಂದು ಜೀವ ಬದುಕಲಿಕ್ಕೆ ಸಾಧ್ಯವಾಗದಂತಹ ಪರಿಸರ ನಿರ್ಮಾಣವಾಗಿರುವುದನ್ನು ವಿರೋಧಿಸುವ ಮೂಲಕ ಸಮಾನತೆಯ ಕಾಳಜಿಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ.

ವಿಚಾರವಾದಿಯ ರೂಪ: ಇಂಗ್ಲೀಷ್ ಶಿಕ್ಷಣ, ಪ್ರಾಚ್ಯ ಪಾಶ್ಚಾತ್ಯ, ತತ್ತ್ವಜ್ಞಾನಗಳ ತಳಸ್ಪರ್ಶಿಯಾದ ತಿಳುವಳಿಕೆ, ಆಧುನಿಕ ವಿಜ್ಞಾನ ಮತ್ತು ಜಾಗತಿಕ ಸಮಾಜವಾದಿ ಚಿಂತನೆಗಳೊಂದಿಗೆ ನಡೆಸಿದ ಸಂವಾದ, ಶ್ರೀ ರಾಮಕೃಷ್ಣ, ವಿವೇಕಾನಂದ ಗಾಂಧಿ, ಅರವಿಂದ ಮತ್ತು ಲೋಹಿಯಾ ಇಂತಹ ವ್ಯಕ್ತಿತ್ವಗಳ ಚಿಂತನೆಯ ಪ್ರಭಾವ ಇತ್ಯಾದಿಗಳಿಂದ ರೂಪುಗೊಂಡ ಕುವೆಂಪು ಅವರ ವೈಚಾರಿಕತೆಯು ಮನುಷ್ಯ ಚೈತನ್ಯದ ಚಲನಶೀಲತೆಯನ್ನು ಸ್ಥಗಿತಗೊಳಿಸುವ ಎಲ್ಲಾ ವಿಕೃತಿಗಳನ್ನು ವಿರೋಧಿಸುತ್ತಾ, ಮನುಷ್ಯರೆಲ್ಲರ ಘನತೆಯನ್ನು ಎತ್ತಿ ಹಿಡಿಯುವ ಸ್ವರೂಪದ್ದಾಗಿದೆ.

ಬೇಂದ್ರೆಯೂರಲ್ಲಿ ಅಧ್ಯಕ್ಷತೆ : ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ 1957ನೇ ವರ್ಷದಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1956ರಲ್ಲಿ ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ಪಡೆದರು.

ನಿಮಗೆ ನೀವೇ ಸರಿಸಾಟಿ:
ಕನ್ನಡ ಕರ್ನಾಟಕದ ಬಗ್ಗೆ ಅವರು ಬರೆದಿರುವ ಭಾವಗೀತೆಗಳು ನಿತ್ಯನೂತನ. ಮನುಜಮತ ವಿಶ್ವಪಥವನ್ನು ಸಾರಿದ ಈ ಸಾಹಿತ್ಯ ಶ್ರೇಷ್ಠ ವಿಶ್ವಮಾನವರೆನಿಸಿದವರು. ಮಹಾಕಾವ್ಯ, ನಾಟಕ, ಖಂಡಕಾವ್ಯ, ಕಥನ ಕಾವ್ಯ, ಭಾವಗೀತೆಯೇ ಮೊದಲಾದ ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಅದ್ವೀತಿಯ. ಕುವೆಂಪು ಅವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಅತಿ ವಿರಳ.

ಕುವೆಂಪು ಆ ಹೆಸರಲ್ಲೇ ಏನೋ ಒಂದು ವಿಧವಾದ ಕಂಪು. ಇದು ಕನ್ನಡದ ಕಂಪು. ಇಪ್ಪತ್ತನೆ ಶತಮಾನದ ಕನ್ನಡ ಸಾಹಿತ್ಯ ಏರುಗತಿಯಲ್ಲಿ ಸಾಗಲು ಕುವೆಂಪು ಕಾರಣಕರ್ತರು ಎಂದರೆ ತಪ್ಪಾಗಲಾರದು. ಕವನ, ಕಾವ್ಯ, ಸಣ್ಣಕಥೆಗಳು, ನಾಟಕ, ಕಾದಂಬರಿ, ಮಹಾಕಾವ್ಯ, ವಿಮರ್ಶೆ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ಅಜರಾಮರವಾಗಿ ಉಳಿದಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ.

ಸಂಸಾರ ನೌಕೆ :
1937 ಏಪ್ರಿಲ್ 30ರಂದು ಹೇಮಾವತಿ ಅವರನ್ನು ಕೈ ಹಿಡಿದರು. ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತಾರಿಣಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ರಾಮಕೃಷ್ಣ ಪರಮಹಂಸರ ಜೀವನದಿಂದ ಪ್ರಭಾವಿತರಾದ ಕುವೆಂಪು ಅವರು ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದಿದ್ದಾರೆ.

ಕುವೆಂಪು ರಾಷ್ಟ್ರೀಯ ಪ್ರತಿಷ್ಠಾನ ಇವರು ಜನಿಸಿದ ಮನೆಯನ್ನು ಕವಿಮನೆ ಹೆಸರಿನ ಮ್ಯೂಸಿಯಂ ಮಾಡಿದೆ. 1987ರಲ್ಲಿ ಶಿವಮೊಗ್ಗದಲ್ಲಿ ಕುವೆಂಪು ಅವರ ಗೌರವಾರ್ಥವಾಗಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು.
ಇಂತಹ ಮಹಾನ್ ಚೇತನ ನವೆಂಬರ್ 11, 1994ರಲ್ಲಿ ಮೈಸೂರಿನಲ್ಲಿ ಕೊನೆಯುಸಿರೆಳೆದು ಕನ್ನಡ ಮಾತೆಯ ಮಡಿಲು ಸೇರಿಕೊಂಡರು. ಕುಪ್ಪಳ್ಳಿಯ ಕವಿಶೈಲದಲ್ಲಿ ಇಂದಿಗೂ ಅವರ ಸಮಾಧಿ ಇದೆ. ಅವರು ಹುಟ್ಟಿದ ಮನೆಯನ್ನು ಪ್ರವಾಸಿಗರಿಗೆ ಪ್ರವಾಸಿ ಕ್ಷೇತ್ರವನ್ನಾಗಿಸಿದ್ದಾರೆ.

ವಿಶ್ವ ಮಾನವ ದಿನ: ಕರ್ನಾಟಕ ಸರ್ಕಾರವು 2015ರ ಡಿಸೆಂಬರ್‍ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ 29ಅನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಮುಡಿಗೇರಿತು.

ಕನ್ನಡಕ್ಕೆ ಕುವೆಂಪು ಸಾಹಿತ್ಯ ಕಾಣಿಕೆ
ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮಧುಮಗಳು ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೊಟ್ಟ ಹಿರಿಮೆಯನ್ನು ಹೊಂದಿದ ಇವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಂಸ್ಕøತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ.

ಇವರು ಬೆರಳ್ಗೆ ಕೊರಳ್, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರಂ, ರಕ್ತಾಕ್ಷಿ, ಜಲಗಾರ ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ ಕೊಳಲು, ಅಗ್ನಿಹಂಸ, ಅನಿಕೇತನ, ಅನುತ್ತರಾ, ಇಕ್ಷುಗಂಗೋತ್ರಿ ಕಥನ ಕವನಗಳು, ಕಲಾ ಸುಂದರಿ, ಕಿಂಕಿಣಿ, ಕೃತ್ತಿಕೆ, ಜೇನಾಗುವೆ, ನವಿಲು, ಪಕ್ಷಿಕಾಶಿ, ಚಿತ್ರಾಂಗದಾ ಮೊದಲಾದ ಕವನ ಸಂಕಲನಗಳು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳನ್ನು ಇವರು ಬರೆದಿದ್ದಾರೆ. ನೆನಪಿನ ದೋಣಿಯಲ್ಲಿ ಕುವೆಂಪು ಅವರ ಆತ್ಮಕಥೆ.

ಅನಿಕೇತನ ಪದ್ಯದ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದ ಮಹಾಕವಿ ಕುವೆಂಪು, ಮನುಷ್ಯಜಾತಿ ತಾನೊಂದೆ ವಲಂ ಎಂಬ ಪಂಪನ ತಾತ್ವಿಕತೆಯನ್ನು ವಿಸ್ತರಿಸಿದವರು ಕುವೆಂಪು. ನಮಗೆ ಬೇಕಾಗಿರುವುದು ಆ ಮತ ಈ ಮತ ಅಲ್ಲ, ಮನುಜ ಮತ. ಆ ಪಥ ಈ ಪಥ ಅಲ್ಲ, ವಿಶ್ವಪಥ ಸರ್ವರ ಸರ್ವಸ್ತರರ ಬದುಕು ಎನ್ನುತ್ತಾರೆ ಕುವೆಂಪು. ನಮ್ಮ ಹಳೆಯ ಶಾಸ್ತ್ರ ಪುರಾಣಗಳನ್ನು ಹೊಸ ಬೆಳಕಿನಲ್ಲಿಟ್ಟು ನೋಡಿ, ಅದರೊಳಗಿನ ಕಸ ಕೊಳೆಗಳನ್ನು ತೆಗೆದೆಸೆದು ಅಲ್ಲಿ ಹೊಸ ದೃಷ್ಟಿಕೋನವನ್ನಿಟ್ಟು ಕಸಿ ಮಾಡಿದರು. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮತ್ತು ಮೌಢ್ಯಗಳಿಂದ ಮುಕ್ತವಾದ ಸನಾತನ ಧರ್ಮ ಅವರ ಕನಸಾಗಿತ್ತು.

#ಡಾ. ಡಿ.ಸಿ.ರಾಮಚಂದ್ರ

RELATED ARTICLES

Latest News