ಬೆಂಗಳೂರು,ಮೇ 14- ಶಾಲಾ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಧರಿಸುವುದಕ್ಕೆ ನಿಷೇಧ ಹೇರಿ ಮತ್ತೆ ಹಿಜಾಬ್‌ಗೆ ಅವಕಾಶ ನೀಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಸಿಡಿದೆದ್ದಿದೆ. ಅಲ್ಪಸಂಖ್ಯಾತರ ಓಲೈಕೆ ಹಾಗೂ ತುಷ್ಟೀಕರಣಕ್ಕಾಗಿ ಒಂದು ಸಮುದಾಯವನ್ನು ಓಲೈಸಿಕೊಂಡು ಹಿಂದೂ ಸಮಾಜದ ಹೆಮೆಯ ಕೇಸರಿ ಶಾಲು ಧರಿಸಲು ಅವಕಾಶ ನೀಡದಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆಂದು ಬಿಜೆಪಿ ನಾಯಕರು ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲೇ ಇರುವಾಗ ಸರ್ಕಾರ ಏಕಾಏಕಿ ತೀರ್ಮಾನ ತೆಗೆದುಕೊಂಡ ಔಚಿತ್ಯವನ್ನು ಸಹಾ ಪ್ರಶ್ನಿಸಿದ್ದಾರೆ.ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವ ವಿ. ಸುನೀಲ್ ಕುಮಾರ್, ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸರ್ಕಾರದ ಕ್ರಮಕ್ಕೆ ಟೀಕಾ ಪ್ರಹಾರ ನಡೆಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅತಿಯಾದ ಓಲೈಕೆ ರಾಜಕಾರಣ ಮಾಡಿ ಯಾವ ದುಃಸ್ಥಿತಿಗೆ ಬಂದಿದೆಯೋ ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಗತಿ ಕಾದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ತುಷ್ಟಿಕರಣದ ಪರಾಕಾಷ್ಠೆ ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನ ಮತ್ತು ನ್ಯಾಯಾಂಗದ ಆಶಯಗಳನ್ನು ಬಲಿ ಕೊಡುತ್ತಿರುವ ಈ ಸರ್ಕಾರಕ್ಕೆ ಜನರೇ ಅಂತ್ಯ ಹಾಡಲಿದ್ದಾರೆ. ದಾವಣಗೆರೆ ಉಪಚುನಾವಣೆ ಸುತ್ತ ನಡೆದ ಘಟನೆಗಳ ನಂತರ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಬೆದರಿರುವ ಕಾಂಗ್ರೆಸ್ ಸರ್ಕಾರ, ಈಗ ತನ್ನ ಮತಬ್ಯಾಂಕ್ ಉಳಿಸಿಕೊಳ್ಳಲು ಹಿಜಾಬ್ ಅಸ್ತ್ರವನ್ನು ಕೈಗೆತ್ತಿಕೊಂಡಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ನೈಜ ಸಮಸ್ಯೆಗಳಾದ ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಂಕಷ್ಟ, ಕಾನೂನು ಸುವ್ಯವಸ್ಥೆಯ ವೈಫಲ್ಯ. ಇವೆಲ್ಲದರ ಬಗ್ಗೆ ಮೌನವಾಗಿರುವ ಕಾಂಗ್ರೆಸ್ ಸರ್ಕಾರ, ಮುನಿಸಿಕೊಂಡಿರುವ ಮುಸ್ಲಿಂ ಮತ ಬ್ಯಾಂಕ್ ಗೆ ಹಿಜಾಬ್ ಮೂಲಕ ಮುಲಾಮು ಹಚ್ಚಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಮಾನ್ಯ ಹೈಕೋರ್ಟ್ ಎತ್ತಿ ಹಿಡಿದಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮುಖ್ಯ ಎಂದು ತೀರ್ಪು ನೀಡಿತ್ತು. ಈಗ ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ಯಾವ ಸೀಮೆ ಜಾತ್ಯತೀತತೆ? ಎಂದು ಪ್ರಶ್ನೆ ಮಾಡಿದ್ದಾರೆ.
ಒಂದು ಸಮುದಾಯದ ಹಿಜಾಬ್‌ಗೆ ಹಸಿರು ನಿಶಾನೆ ತೋರಿರುವ ಸಿದ್ದರಾಮಯ್ಯ ಸರ್ಕಾರ, ಕೇಸರಿ ಶಾಲುವಿಗೆ ಮಾತ್ರ ನಿಷೇಧ ಹೇರಿದೆ. ನಿಮ ಈ ಓಲೈಕೆ ರಾಜಕಾರಣ ಹಿಂದೂಗಳಿಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ ಮುಖ್ಯಮಂತ್ರಿಗಳೇ? ಶಾಲಾ-ಕಾಲೇಜುಗಳನ್ನು ಸಮಾನತೆಯ ಕೇಂದ್ರಗಳನ್ನಾಗಿ ನೋಡುವ ಬದಲು, ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ವಿಭಜಿಸುತ್ತಿರುವ ನಿಮ್ಮ ನಡೆಯೇ ನಾಚಿಕೆಗೇಡು. ಎಂದು ಅಶೋಕ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಮಾಜಿ ಸಚಿವ ವಿ.ಸುನೀಲ್ ಕುಮಾರ್, ಸರ್ಕಾರಕ್ಕೊಂದು ಶೈಕ್ಷಣಿಕ ಧೋರಣೆಯೇ ಇಲ್ಲ. ಸಾಮಾಜಿಕ ಸಾಮರಸ್ಯವನ್ನು ಕದಡುವ ವಿಷ ಕಕ್ಕುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ. ಇಂಥ ಓಲೈಕೆ ರಾಜಕಾರಣದಿಂದ ದೇಶಾದ್ಯಂತ ಕಸವಾಗಿರುವ ಕಾಂಗ್ರೆಸ್ ಸದ್ಯದಲ್ಲಿ ರಾಜ್ಯದಲ್ಲೂ ಮೂಲೆಗೆ ಸೇರುವ ದಿನಗಣನೆ ಈ ಆದೇಶದೊಂದಿಗೆ ಪ್ರಾರಂಭವಾಗಿದೆ. ಅತಿಯಾದ ಓಲೈಕೆ ಮಾಡಿದ್ದಕ್ಕಾಗಿ ಪಶ್ಚಿಮ ಬಂಗಾಲ ಹಾಗೂ ಇತರ ರಾಜ್ಯಗಳಲ್ಲಿ ಕತೆ ಏನಾಗಿದೆ ಎಂಬುದನ್ನು ಕಾಂಗ್ರೆಸ್ ಮರೆಯದಿರಲಿ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ ನೀತಿಯನ್ನು ಬಹಿರಂಗವಾಗಿ ಪ್ರಕಟಗೊಳಿಸಿದೆ. 2022ರಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೆ ತಂದಿತ್ತು. ಈ ವಿಚಾರ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲೇ ಸರ್ಕಾರ ಆದೇಶವನ್ನು ವಾಪಾಸ್ ಪಡೆದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ನ್ಯಾಯಾಂಗ ನಿಂದನೆಯೂ ಹೌದು ಎಂದು ಆಕ್ಷೇಪಿಸಿದ್ದಾರೆ.
ತನ್ನ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವುದಕ್ಕಾಗಿ ದೇಶದ ಸಮಗ್ರತೆ ಹಾಗೂ ಸಂವಿಧಾನವನ್ನು ಒತ್ತೆ ಇಡುವುದಕ್ಕೆ ಹೇಸದ ಕಾಂಗ್ರೆಸಿರಿಗೆ ಈಗ ಮತ್ತೆ ಹಿಜಾಬ್ ಧ್ಯಾನ ಶುರುವಾಗಿದೆ. ಈ ಆದೇಶ ಎಷ್ಟು ಗೊಂದಲದ ಗೂಡಾಗಿದೆಯೆಂದರೆ ಸಮವಸ್ತ್ರದ ಮೂಲ ಉದ್ದೇಶವನ್ನು ಬದಲಾಯಿಸಬಾರದು ಅಥವಾ ಹಾಳು ಮಾಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಹಿಜಾಬ್ ಧರಿಸಿದರೆ ಸಮವಸ್ತ್ರದ ಮೂಲ ಕಲ್ಪನೆಯೇ ವ್ಯತ್ಯಾಸವಾಗುತ್ತದೆ ಎಂದು ಟೀಕಿಸಿದ್ದಾರೆ. ಬಿಜೆಪಿ ಉಚ್ಚಾಟಿತ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಹಿಂದೆ ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್‌ನ ತ್ರಿಸದಸ್ಯ ಪೀಠ ನೀಡಿದ ತೀರ್ಪು ನೀಡಿದ್ದರೂ ಹಿಜಾಬ್ ಧರಿಸಲು ಅವಕಾಶ ನೀಡಲು ಅತಿ ಮುತುವರ್ಜಿ ವಹಿಸುತ್ತಿರುವ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಕೇವಲ ರಾಜಕೀಯ ಉದ್ದೇಶಕ್ಕಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆಯುವ ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಇಸ್ಲಾಮೀಕರಣಗೊಳಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಜಾತಿ, ಮತ, ಬಡವ, ಶ್ರೀಮಂತ ಎಂಬ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಶಾಲಾ ಸಮವಸ್ತ್ರದ ಆಶಯಕ್ಕೆ ವಿರುದ್ಧವಾಗಿ ಇದೀಗ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
2021 ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 6 ವಿದ್ಯಾರ್ಥಿನಿಯರು ದುರುದ್ದೇಶಪೂರ್ವಕವಾಗಿ ಹಿಜಾಬ್ ಅವಕಾಶ ನೀಡುವಂತೆ ಆಗ್ರಹಿಸಿ ವಿವಾದ ಸೃಷ್ಟಿಸಿ ರಾಜ್ಯ ಹಾಗೂ ದೇಶದಾದ್ಯಂತ ಗೊಂದಲ ನಿರ್ಮಾಣವಾಗಿ ಶಿಕ್ಷಣ ವ್ಯವಸ್ಥೆಗೆ ಹಾಗೂ ಕಾನೂನು ವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದು, ಈ ಸಂದರ್ಭದಲ್ಲಿ ಕೆಲವು ಮತೀಯವಾದಿ ನಿಷೇಧಿತ ಸಂಘಟನೆಗಳು ಹಿಜಾಬ್ ವಿವಾದದ ಮೂಲಕ ಶಾಂತಿ ಸುವ್ಯವಸ್ಥೆಗೂ ಧಕ್ಕೆ ತರುವ ಪ್ರಯತ್ನ ಮಾಡಿರುವುದನ್ನು ರಾಜ್ಯದ ಜನತೆ ಇಂದೂ ಮರೆತಿಲ್ಲ.
ಹಿಜಾಬ್ ಧರಿಸಲು ಅವಕಾಶ ನೀಡುವ ಸರ್ಕಾರ ಕೇಸರಿ ಶಾಲು ಧರಿಸಲು ಅವಕಾಶ ನೀಡದೆ ಮತ್ತೊಮ್ಮೆ ತನ್ನ ಹಿಂದೂ ವಿರೋಧಿ ನಿಲುವನ್ನು ಮುಂದುವರೆಸಿದೆ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ.
