Homeರಾಜ್ಯಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಹಿಂದೂ ಸಂಘಟನೆಗಳ ನಿರ್ಧಾರ

ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಹಿಂದೂ ಸಂಘಟನೆಗಳ ನಿರ್ಧಾರ

Hindu organizations decide to fight legal battle against government

ಬೆಂಗಳೂರು,ಮೇ 14- ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ನೀಡಿರುವ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲು ಹಿಂದೂಪರ ಸಂಘಟನೆಗಳು ಮುಂದಾಗಿವೆ.

ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಸರ್ಕಾರ ನ್ಯಾಯಾಂಗ ಉಲ್ಲಂಘಿಸಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ ಎಂದು ಹಿಂದೂಪರ ಸಂಘಟನೆಗಳು ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಲು ತೀರ್ಮಾನಿಸಿವೆ. ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಕೆಲವು ಸಂಘಟನೆಗಳು ಕರ್ನಾಟಕ ಸರ್ಕಾರದ ವಿವಾದಾತಕ ಆದೇಶವನ್ನು ಪ್ರಶ್ನಿಸಿ ಕಾನೂನು ಸಮರಕ್ಕೆ ಸಜ್ಜಾಗಿವೆ.

ಈ ಹಿಂದೆ 2022ರ ಮಾ. 15 ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠ ಅಂದು ಹಿಜಾಬ್‌ ನಿಷೇಧ ಮಾಡಿ ರಾಜ್ಯಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿತ್ತು.

ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಕೆಲವು ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು. ಅಂತಿಮವಾಗಿ ವಾದ-ಪ್ರತಿವಾದ ನಡೆದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತಾ ಮತ್ತು ಸುಧಾಂಶು ಧುಲಿಯಾ ನೇತೃತ್ವದ ದ್ವಿಸದಸ್ಯ ಪೀಠ ವಿಭಿನ್ನವಾದ ತೀರ್ಪು ನೀಡಿತ್ತು.

ನ್ಯಾ. ಹೇಮಂತ್‌ ಗುಪ್ತಾ ಅವರು ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದರೆ ಮತ್ತೊಬ್ಬ ನ್ಯಾ. ಸುಧಾಂಶು ಧುಲಿಯಾ ಅವರು ಹೈಕೋರ್ಟ್‌ ಆದೇಶವನ್ನು ರದ್ದುಗೊಳಿಸಿದ್ದರು.
ಅಂತಿಮವಾಗಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದ್ದು, ಈಗಲೂ ವಿಚಾರಣಾ ಹಂತದಲ್ಲಿದೆ.

ಸರ್ವೋಚ್ಚ ನ್ಯಾಯಾಲಯ ಯಾವುದೇ ಅಂತಿಮ ತೀರ್ಪು ನೀಡದೇ ಇರುವಾಗ ರಾಜ್ಯಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವುದೇ ನ್ಯಾಯಾಂಗ ನಿಂದನೆ ಎಂಬುದು ಹಿಂದೂಪರ ಸಂಘಟನೆಗಳ ವಾದವಾಗಿದೆ.ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸುವುದಾಗಿ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಹಿಜಾಬ್‌ ಧರಿಸುವುದು ಮುಸ್ಲಿಂ ಮಹಿಳೆಯರ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್‌ ಹೇಳಿದೆ. ಈ ಕುರಿತು ಸರ್ಕಾರ ನೀಡಿದ ಆದೇಶ ಕಾನೂನುಬದ್ಧವಾಗಿದೆ. ಫೆಬ್ರವರಿ 5ರಂದು ಸರ್ಕಾರ ನೀಡಿದ ಆದೇಶವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಹೈಕೋರ್ಟ್‌ ಹೇಳಿದ್ದೇನು ? :
ಶಾಲಾ-ಕಾಲೇಜುಗಳಲ್ಲಿ ಅಂದಿನ ಬಿಜೆಪಿ ಸರ್ಕಾರ ಹಿಜಾಬ್‌ ಧರಿಸುವುದನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿಹಿಡಿದಿತ್ತು.ಹಿಜಾಬ್‌ ಧರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶ ಕಾನೂನುಬದ್ಧವಾಗಿದೆ ಎಂದು ಹೇಳಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು, ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ಮತ್ತು ಸರ್ಕಾರದ ಪರ ನಡೆದ ಸುದೀರ್ಘ ವಾದಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಸ್ತೃತ ಪೀಠ, ತೀರ್ಪು ಪ್ರಕಟಿಸಿತ್ತು.

ಹಿಜಾಬ್‌ ಧರಿಸಿವುದು ಮುಸ್ಲಿಂ ಮಹಿಳೆಯರ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್‌ ಹೇಳಿದೆ. ಈ ಕುರಿತು ಸರ್ಕಾರ ನೀಡಿದ ಆದೇಶ ಕಾನೂನುಬದ್ಧವಾಗಿದೆ. ಫೆಬ್ರವರಿ 5ರಂದು ಸರ್ಕಾರ ನೀಡಿದ ಆದೇಶವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಸಮವಸ್ತ್ರಗಳನ್ನು ಕಡ್ಡಾಯಗೊಳಿಸುವ ಸರ್ಕಾರದ ಆದೇಶದಿಂದ ಮೂಲಭೂತ ಹಕ್ಕುಗಳ ಸಾಂವಿಧಾನಿಕ ಉಲ್ಲಂಘನೆ ಆಗಿಲ್ಲ.

ಹಿಜಾಬ್‌ ಧಾರಣೆಯು ಮುಸ್ಲಿಂ ಧರ್ಮದ ಪ್ರಕಾರ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗ ಎಂಬ ಎಲ್ಲ ಅರ್ಜಿಗಳನ್ನೂ ವಜಾಗೊಳಿಸಿತ್ತು. ಅಂದಿನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ , ನ್ಯಾ. ಕೃಷ್ಣ ಎಸ್‌‍ ದೀಕ್ಷಿತ್‌ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ಅವರ ಪೂರ್ಣ ಪೀಠ ತೀರ್ಪು ನೀಡಿತ್ತು.

RELATED ARTICLES

Latest News