ನವದೆಹಲಿ, ಆ.14- ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿಗೆ ಕೇಂದ್ರ ಸರ್ಕಾರ 301 ಶೌರ್ಯ ಪದಕಗಳನ್ನು ಘೋಷಿಸಿದೆ. ಈ 301 ಶೌರ್ಯ ಪದಕಗಳ ಪೈಕಿ ಎಡಪಂಥೀಯ ಉಗ್ರವಾದ (ಎಲ್ಡಬ್ಲ್ಯುಇ) ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ 197 ಸಿಬ್ಬಂದಿಗೆ ಪದಕ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಒಟ್ಟಾರೆ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ (ಎಚ್ಜಿಸಿಡಿ) ಹಾಗೂ ಕಾರಾಗೃಹ ಸೇವೆಗಳ 1,057 ಸಿಬ್ಬಂದಿಯನ್ನು ಈ ಸ್ವಾತಂತ್ರ್ಯ ದಿನದಂದು ಶೌರ್ಯ ಮತ್ತು ಸೇವಾ ಪದಕಗಳ ಮೂಲಕ ಗೌರವಿಸಲಾಗುತ್ತಿದೆ.
ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ, ಅಪರಾಧ ತಡೆಯುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ ಗಮನಾರ್ಹ ಶೌರ್ಯ ಪ್ರದರ್ಶಿಸಿದ ಸಿಬ್ಬಂದಿಗೆ, ಅವರ ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ಅನುಗುಣವಾಗಿ ಅವರು ಎದುರಿಸಿದ ಅಪಾಯವನ್ನು ಪರಿಗಣಿಸಿ ಶೌರ್ಯ ಪದಕ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
301 ಶೌರ್ಯ ಪದಕ ಪುರಸ್ಕೃತರಲ್ಲಿ 272 ಮಂದಿ ಪೊಲೀಸ್ ಸಿಬ್ಬಂದಿಯಾಗಿದ್ದು, 29 ಮಂದಿ ಅಗ್ನಿಶಾಮಕ ಸೇವೆಯ ಸಿಬ್ಬಂದಿಯಾಗಿದ್ದಾರೆ. ಇವರ ಪೈಕಿ ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳ 197 ಮಂದಿ, ಜಮ್ಮು ಮತ್ತು ಕಾಶ್ಮೀರದ 51 ಮಂದಿ, ಈಶಾನ್ಯ ರಾಜ್ಯಗಳ 12 ಮಂದಿ ಹಾಗೂ ಇತರ ಪ್ರದೇಶಗಳ 41 ಮಂದಿ ತಮ್ಮ ಧೈರ್ಯಶಾಲಿ ಕಾರ್ಯಾಚರಣೆಗಳಿಗಾಗಿ ಗೌರವಿಸಲ್ಪಟ್ಟಿದ್ದಾರೆ.

ಇದಲ್ಲದೆ, 92 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ (ವಿಶಿಷ್ಟ ಸೇವೆ) ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಪೈಕಿ 83 ಮಂದಿ ಪೊಲೀಸ್ ಸೇವೆಯವರು, ನಾಲ್ವರು ಅಗ್ನಿಶಾಮಕ ಸೇವೆಯವರು, ಮೂವರು ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದವರು ಹಾಗೂ ಇಬ್ಬರು ಕಾರಾಗೃಹ ಸೇವೆಯ ಸಿಬ್ಬಂದಿಯಾಗಿದ್ದಾರೆ. ವಿಶಿಷ್ಟ ಸೇವೆಯಲ್ಲಿ ವಿಶೇಷ ಸಾಧನೆಯ ದಾಖಲೆಯನ್ನು ಹೊಂದಿರುವ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಅದೇ ರೀತಿ, ಮೌಲ್ಯಯುತ ಸೇವೆ, ಕಾರ್ಯಕ್ಷಮತೆ ಮತ್ತು ಕರ್ತವ್ಯನಿಷ್ಠೆಗಾಗಿ ನೀಡಲಾಗುವ ಶ್ಲಾಘನೀಯ ಸೇವಾ ಪದಕ (ಎಂಎಸ್ಎಂ) ವಿಭಾಗದಲ್ಲಿ ಒಟ್ಟು 664 ಪದಕಗಳನ್ನು ನೀಡಲಾಗಿದೆ. ಇವುಗಳಲ್ಲಿ 606 ಪೊಲೀಸ್ ಸಿಬ್ಬಂದಿಗೆ, 28 ಅಗ್ನಿಶಾಮಕ ಸೇವಾ ಸಿಬ್ಬಂದಿಗೆ, 18 ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ಹಾಗೂ 12 ಕಾರಾಗೃಹ ಸೇವಾ ಸಿಬ್ಬಂದಿಗೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
