ಬೆಂಗಳೂರು, ಆ.14- ಕಬ್ಬನ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಾಳೆ ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಿಗ್ಗೆ 8.54ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾರಂಭಕ್ಕೆ ಆಗಮಿಸಲಿದ್ದು, 9 ಗಂಟೆಗೆ ಸರಿಯಾಗಿ ವಿಧ್ಯುಕ್ತ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ವಂದನೆ ಹಾಗೂ ಪೊಲೀಸ್ ಬ್ಯಾಂಡ್ನಿಂದ ರಾಷ್ಟ್ರಗೀತೆ ಮೊಳಗಲಿದೆ.
ಗೌರವ ವಂದನೆ ಸ್ವೀಕರಿಸಿ ಮೆರವಣಿಗೆಯನ್ನು ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿ ಅವರು ಏಕತೆ, ಪ್ರಗತಿ ಮತ್ತು ಸ್ವಾತಂತ್ರ್ಯದ ಮನೋಭಾವವನ್ನು ಒತ್ತಿಹೇಳುವ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಲಿದ್ದಾರೆ. ಬೆಳಗ್ಗೆ 10.10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಶ್ರೀ ಮೃತ್ಯುಂಜಯ ದೊಡ್ಡವಾಡ, ಸುಮಾ ಪ್ರಸಾದ್ ಮತ್ತು ತಂಡದಿಂದ ನಾಡಗೀತೆ ಹಾಗೂ ರೈತಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಥಣಿಸಂದ್ರದ ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಬೆಂಗಳೂರು ಉತ್ತರ ನಗರ ನಿಗಮ ಹಾಗೂ ಸಂಯುಕ್ತ ಪೂರ್ವ ವಿಶ್ವವಿದ್ಯಾಲಯ ಕಾಲೇಜಿನ 750 ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಕ್ಕೆ ಗೌರವ ಸಲ್ಲಿಸಲಿದ್ದಾರೆ. ಬೀದರ್ ಜಿಲ್ಲೆಯ ಮಹಿಳಾ ಸಿಬ್ಬಂದಿ ಹಾಗೂ ಬೆಂಗಳೂರು ನಗರ ಪೊಲೀಸರಿಂದ ವಿಶೇಷ ಪ್ರದರ್ಶನ ನಡೆಯಲಿದೆ.
ಇದಲ್ಲದೆ ಪ್ರಮುಖ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ 600 ವಿದ್ಯಾರ್ಥಿಗಳಿಂದ ಯುವ ಸಂಘದ ಪ್ರಸ್ತುತಿ ನಡೆಯಲಿದೆ. ಬಳಿಕ ಮುಖ್ಯಮಂತ್ರಿ ಅವರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ. ಭಾರತದ ಸ್ವಾತಂತ್ರ್ಯವನ್ನು ಗೌರವಿಸುವ ಹಾಗೂ ನಾಗರಿಕರಲ್ಲಿ ಸಮುದಾಯ ಮತ್ತು ದೇಶಭಕ್ತಿಯ ಪ್ರಜ್ಞೆಯನ್ನು ಬೆಳೆಸುವ ನಗರದ ಬದ್ಧತೆಯನ್ನು ಕಾರ್ಯಕ್ರಮ ಪ್ರತಿಬಿಂಬಿಸಲಿದೆ.
8 ಸಾವಿರ ಜನರಿಗೆ ಆಸನ ವ್ಯವಸ್ಥೆ
ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ವೀಕ್ಷಿಸಲು ಸುಮಾರು 8,000 ಜನರು ಆಗಮಿಸುವ ನಿರೀಕ್ಷೆಯಿದ್ದು, ಅತಿಗಣ್ಯರು, ಗಣ್ಯರು, ಇತರೆ ಆಹ್ವಾನಿತರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿಗಣ್ಯ ವ್ಯಕ್ತಿಗಳು, ರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದ ಹಿರಿಯ ಮಟ್ಟದ ಅಧಿಕಾರಿಗಳು ಗೇಟ್-2 ಮೂಲಕ ಪ್ರವೇಶಿಸಬೇಕು.
ಗೇಟ್-3 ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿ ಮತ್ತು ಐಜಿಪಿ ಹಾಗೂ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಗೇಟ್-4 ಮೂಲಕ ಆಡಳಿತಾಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಅವಕಾಶ ನೀಡಲಾಗಿದೆ.
ಗೇಟ್-5 ಮೂಲಕ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು ಸಾರ್ವಜನಿಕರಿಗೆ ಆನ್ಲೈನ್ ಮೂಲಕ 2,000 ಇ-ಪಾಸ್ಗಳ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಸೇವಾ ಸಿಂಧು ವೆಬ್ಸೈಟ್ನಲ್ಲಿ ಆಧಾರ್ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಇ-ಪಾಸ್ ಪಡೆಯಬಹುದಾಗಿದೆ. ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ವೇದಿಕೆಯ ಬಲಭಾಗದಲ್ಲಿ, ಮಾಧ್ಯಮದವರಿಗೆ ವೇದಿಕೆಯ ಎಡಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಹ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು. ಸಾರ್ವಜನಿಕರಿಗಾಗಿ ಇರುವ ವೀಕ್ಷಣಾ ಗ್ಯಾಲರಿಯನ್ನು ವಿಸ್ತರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ನಿಗದಿತ ಸ್ಥಳಗಳಲ್ಲೇ ವಾಹನಗಳ ನಿಲುಗಡೆಗೆ ಆಯುಕ್ತರ ಸೂಚನೆ
ಬೆಂಗಳೂರು, ಆ.14- ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ ಪಾಸ್ಗಳನ್ನು ಹೊಂದಿರುವ ಎಲ್ಲ ಆಹ್ವಾನಿತರು ತಮ್ಮ ಪಾಸ್ಗಳಲ್ಲಿ ನಿಗದಿಪಡಿಸಿರುವ ಗೇಟ್ಗಳಲ್ಲಿ ಇಳಿದುಕೊಳ್ಳಬೇಕು. ಅಲ್ಲದೆ, ಪಾಸ್ನಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲೇ ವಾಹನಗಳನ್ನು ನಿಲುಗಡೆ ಮಾಡುವಂತೆ ಮನವಿ ಮಾಡಿದರು.
ತುರ್ತು ಸೇವಾ ವಾಹನಗಳಾದ ಆಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಎಎಸ್ಆರ್ಪಿ, ಕ್ಯೂಆರ್ಟಿ, ಬಿಬಿಎಂಪಿ ಹಾಗೂ ಪಿಡಬ್ಲ್ಯುಡಿ ವಾಹನಗಳು ಪ್ರವೇಶದ್ವಾರ 2ರ ಮೂಲಕ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ, ಬಳಿಕ ಪೋರ್ಟ್ ವಾಲ್ ಹಿಂಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ವಾಹನ ನಿಲುಗಡೆ ನಿಷೇಧಿತ ರಸ್ತೆಗಳು
ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್. ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ವರೆಗೆ ಹಾಗೂ ಎಂಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ. ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂಭ್ರಮಾಚರಣೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಹಾಗೂ ವಾಹನ ಸವಾರರು ಪೊಲೀಸರೊಂದಿಗೆ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
