ಬೆಂಗಳೂರು, ಮೇ 14- ಸಚಿವ ಸಂಪುಟ ಪುನರ್ ರಚನೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 15ಕ್ಕೆ ತಾವು ದೆಹಲಿಗೆ ಭೇಟಿ ನೀಡುವ ವದಂತಿಗಳು ಆಧಾರ ರಹಿತ ಎಂದು ತಳ್ಳಿ ಹಾಕಿದರು.
ಪದೇ ಪದೇ ಈ ಕುರಿತು ಪ್ರಶ್ನೆಗಳು ಎದುರಾದಾಗ ಮಾಧ್ಯಮದ ವಿರುದ್ಧ ಸಿದ್ದರಾಮಯ್ಯ ಸಿಡಿಮಿಡಿಯಾದರು. ದೆಹಲಿಗೆ ಭೇಟಿ ನೀಡುವ ಬಗ್ಗೆ ನಾನೇ ಸಮಯ ಹೇಳಬೇಕು. ಅದನ್ನು ಬಿಟ್ಟು ವದಂತಿ ಆಧರಿಸಿ ಪ್ರಶ್ನೆ ಕೇಳಿದರೆ ನಾನು ಉತ್ತರಿಸುವುದಿಲ್ಲ ಎಂದಿದ್ದಾರೆ.
ಸಚಿವ ಸಂಪುಟ ಪುನರ್‌ರಚನೆಗೆ ಸಂಬಂಧಪಟ್ಟಂತೆ ವರಿಷ್ಠರು ಕರೆ ನೀಡಿದಾಗ ತಾವು ದೆಹಲಿಗೆ ಹೋಗಲು ಸಿದ್ಧ. ಸಚಿವ ಸಂಪುಟವಂತೂ ಪುನರ್ ರಚನೆಯಾಗಬೇಕು ಎಂದು ಹೇಳಿದ್ದಾರೆ.
ಮುಂದುವರೆದ ಗೊಂದಲ:
ರಾಜ್ಯ ನಾಯಕತ್ವದ ಬದಲಾವಣೆ ಗೊಂದಲ ಮುಂದುವರೆದಿದೆ. ಸಚಿವ ಸಂಪುಟ ಪುನರ್‌ರಚನೆಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಗೊಂದಲವನ್ನು ಬಗೆಹರಿಸಬೇಕು ಎಂದು ಸಿದ್ದರಾಮಯ್ಯ ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.
ಒಮೆ ಸಂಪುಟ ಪುನರ್‌ರಚನೆಯಾದರೆ, ಮುಂದಿನ ಎರಡು ವರ್ಷಗಳ ವರೆಗೂ ನಾಯಕತ್ವ ಅಬಾಧಿತವಾಗಿರಲಿದೆ. ಹೀಗಾಗಿಯೇ ಹಿರಿಯ ಶಾಸಕರು, ಕಿರಿಯ ಶಾಸಕರು ಸೇರಿ ವರಿಷ್ಠರ ನಾಯಕರ ಮೇಲೆ ಒತ್ತಡ ತರುತ್ತಿದ್ದು, ಸಂಪುಟ ಪುನರ್‌ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಹಿರಿಯ ಶಾಸಕರ ಅಸಮಾಧಾನ:
ರಾಜ್ಯದಲ್ಲಿ ಸುಮಾರು 48ಕ್ಕೂ ಹೆಚ್ಚು ಶಾಸಕರು 3ಕ್ಕಿಂತಲೂ ಹೆಚ್ಚು ಬಾರಿ ಗೆಲುವು ಕಂಡಿದ್ದಾರೆ. ಅವರು ಬಾಕಿಯಿರುವ ಎರಡು ವರ್ಷಗಳಿಗಾದರೂ ಸಂಪುಟದಲ್ಲಿ ಸಚಿವರಾಗಲು ಅವಕಾಶ ಪಡೆಯಬೇಕು ಎಂದು ಹರಸಾಹಸ ನಡೆಸುತ್ತಿದ್ದಾರೆ. ಆದರೆ ನಾಯಕತ್ವದ ವಿವಾದ ಇತ್ಯರ್ಥವಾಗದ ಹೊರತು, ಸಂಪುಟ ಪುನರ್‌ರಚನೆಗೆ ಅವಕಾಶ ನೀಡಬಾರದು ಎಂದು ಡಿ.ಕೆ.ಶಿವಕುಮಾರ್ ಅಡ್ಡಿ ಪಡಿಸುತ್ತಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ಪ್ರತಿಷ್ಠೆಯ ಸಂಘರ್ಷಕ್ಕೆ ಹಿರಿಯ ಶಾಸಕರ ಆಕಾಂಕ್ಷೆಗಳಿಗೆ ತಣ್ಣೀರು ಎರಚಿದಂತಾಗಿದೆ. ಯಾರೋ ಮಾಡುವ ತಪ್ಪಿಗೆ ತಮಗೇಕೆ ಶಿಕ್ಷೆ? ಎಂದು ಹಿರಿಯರು ಪ್ರಶ್ನೆ ಕೇಳುತ್ತಿದ್ದಾರೆ.
ಹೈಕಮಾಂಡ್ ಬಯಸಿದಾಗಲೇ ನಾಯಕತ್ವದ ವಿವಾದ ಬಗೆ ಹರಿಯಲಿ. ಅದಕ್ಕೂ ಮುನ್ನ ಸಚಿವ ಸಂಪುಟ ಪುನರ್‌ರಚನೆಯಾಗಲಿ ಎಂದು ಹಿರಿಯ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
