ಬೆಂಗಳೂರು,ಏ.17- ಹಕ್ಕಿ ಜ್ವರ ರಾಜ್ಯಕ್ಕೂ ಕಾಲಿಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಪೌಲ್ಟ್ರಿ ಫಾರಂನಿಂದ ರಾಜ್ಯದ ನಾನಾ ಭಾಗಗಳಿಗೆ ಕೋಳಿಗಳನ್ನು ವಿತರಣೆ ಮಾಡಲಾಗುತ್ತಿತ್ತು. ಹೀಗಾಗಿ ಸರ್ಕಾರದ ಪಶು ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪಂಚಾಯಿತಿಗಳಿಗೂ ನೋಟೀಸ್ ನೀಡಿದ್ದಾರೆ.
ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದ್ದು, ಫಾರಂನಲ್ಲಿರುವ ಕೋಳಿಗಳನ್ನು ಗುಂಡಿ ತೆಗೆದು ಮುಚ್ಚಿದ್ದಾರೆ ಎನ್ನಲಾಗಿದೆ. ಜೊತೆಗೆ ಕೋಳಿ ಸಾಕಣೆಗಾರರನ್ನು ಕ್ವಾರಂಟೈನ್ ಮಾಡಿದ್ದಾರೆ.
ಸದ್ಯ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಾಹಿತಿ ಬಂದಿದ್ದು, ರಾಜ್ಯ ಸರ್ಕಾರ ಪಶು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಿದೆ.
ಬಿಸಿಲ ತಾಪದಲ್ಲಿ H5N1 ಹಕ್ಕಿ ಜ್ವರ ಬಂದಿದ್ದು, ಸುತ್ತಮುತ್ತ ಇರುವ ಕೋಳಿ ಶೆಡ್ ತಪಾಸಣೆ ನಡೆಸುವಂತೆ ತಿಳಿಸಿದ್ದಾರೆ.ಪೌಲ್ಟ್ರಿ ಫಾರಂನಲ್ಲಿ ತಪಾಸಣೆ ಮಾಡಿ ಪರಿಶೀಲನೆ ನಡೆಸಲಾಗುತ್ತಿದ್ದು, ಕೋಳಿ ಸಾಕಣೆ ಶೆಡ್ ಹಾಗೂ ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಬಿಸಿಲ ತಾಪದಲ್ಲಿ ಎಚ್5ಎನ್1 ಹಕ್ಕಿ ಜ್ವರ ಭೀತಿ ಹೆಚ್ಚಿಸಿದೆ. ಬಿಸಿಲಿನಿಂದ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.
ಹಕ್ಕಿಜ್ವರ ಎಂದರೇನು? :
ಹಕ್ಕಿ ಜ್ವರ ಎಂದರೆ ಅದು ಹಕ್ಕಿಗಳಿಗೆ ಬರುವಂತಹ ಜ್ವರವಾಗಿದೆ. ಆದರೆ ಇದು ಮನುಷ್ಯರಿಗೆ ಕೂಡ ಹಬ್ಬುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣ ಸೃಷ್ಟಿಯಾಗಿದೆ.ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ತುಂಬಾ ಚಿಂತೆಯನ್ನು ಸೃಷ್ಟಿ ಮಾಡಿವೆ.
H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದ್ದು, ಇದನ್ನು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ.
ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುವುದು.ಆದರೆ ಮನುಷ್ಯರಿಂದ ಮನುಷ್ಯರಿಗೆ ಇದುವರೆಗೆ ಹಬ್ಬಿರುವುದು ತಿಳಿದುಬಂದಿಲ್ಲ. H5N8 ಮಾದರಿಯ ಹಕ್ಕಿ ಜ್ವರದ ವೈರಸ್ ಇದುವರೆಗೆ ವಿಶ್ವದಲ್ಲಿ ಮನುಷ್ಯರಲ್ಲಿ ಕಂಡುಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆಯು ಹೇಳಿದೆ.
ಹಕ್ಕಿ ಜ್ವರದ ಲಕ್ಷಣಗಳು ಮತ್ತು ಚಿಹ್ನೆಗಳು :
ಕೆಮು
ಉಸಿರಾಟದಲ್ಲಿ ತೊಂದರೆ
ತೀವ್ರ ಜ್ವರ
ತಲೆನೋವು
ಸ್ನಾಯುಗಳ ನೋವು
ಮೂಗು ಸೋರುವಿಕೆ
ಗಂಟಲಿನ ಊತ
ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ
ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುವುದು ಎಂದು ಹೇಳಲಾಗಿದೆ.
ಇನ್ನೂ ಕೆಲವರಲ್ಲಿ ಕಣ್ಣು ಕೆಂಪಾಗುವ ಸಮಸ್ಯೆಯು ಕಂಡುಬರುವುದು. ಸೋಂಕು ದೇಹವನ್ನು ಒಗ್ಗಿಕೊಂಡು 2-5 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುವುದು. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಆಗ ಇದು ಪ್ರಾಣಾಂತಿಕವಾಗುವುದನ್ನು ತಪ್ಪಿಸಬಹುದು.ಕೆಲವೊಂದು ವೈರಲ್ ವಿರೋಧಿ ಔಷಧಿಗಳಿಂದ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಸೋಂಕಿನ ತೀವ್ರತೆಯು ಕಡಿಮೆ ಆಗುವುದು.
ಮನುಷ್ಯರಿಗೆ ಹಕ್ಕಿ ಜ್ವರ ಹಬ್ಬುವುದು ಹೇಗೆ ? :
ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಅದರ ಹಿಕ್ಕೆಗಳು ಮತ್ತು ಹಾಸನ್ನು ಮುಟ್ಟುವುದು, ಸೋಂಕಿತ ಹಕ್ಕಿಯನ್ನು ಕೊಲ್ಲುವುದು ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡುವುದು.ಸೋಂಕು ಹರಡಿರುವಂತಹ ಪ್ರದೇಶದಲ್ಲಿ ಕೋಳಿ ಅಥವಾ ಕೋಳಿ ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ತಿಂದರೆ ಅದರಿಂದ ಯಾವುದೇ ಸೋಂಕು ಹಬ್ಬುವ ಸಾಧ್ಯತೆ ಇರುವುದಿಲ್ಲ.
ತಡೆಯುವುದು ಹೇಗೆ ? :
ಹಕ್ಕಿ ಜ್ವರ ಕಾಣಿಸಿಕೊಂಡಿರುವಂತಹ ಯಾವುದೇ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದರೆ, ಆಗ ನೀವು ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ.
ಸ್ವಚ್ಛತೆ ಬಗ್ಗೆ ಗಮನ ನೀಡಿ :
ಕೈಗಳನ್ನು ನಿರಂತರವಾಗಿ ತೊಳೆಯುತ್ತಿರಿ. ಬಿಸಿ ನೀರು ಮತ್ತು ಸೋಪು ಬಳಸಿ. ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ. ಆಲ್ಕೋಹಾಲ್ ಇರುವ ಸ್ಯಾನಿಟೈಸರ್‌ನ್ನು ಪ್ರಯಾಣದ ವೇಳೆ ಬಳಸಿ.
ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳು ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಿ. ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿ ತಿನ್ನಬೇಡಿ. ಹಸಿ ಮೊಟ್ಟೆ ಸೇವಿಸಬೇಡಿ.
ಪ್ರಯಾಣಕ್ಕೆ ಮೊದಲು ಜ್ವರದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಿರಿ. ನೀವು ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲದೆ ಇದ್ದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು.
H5N1 ಹಕ್ಕಿಜ್ವರದ ವೈರಸ್‌ಗೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದ್ದು, ಇದಕ್ಕೆ ಅಮೆರಿಕಾದ ಎಫ್‌ಡಿಎಯಿಂದ ಅನುಮತಿ ಕೂಡ ಸಿಕ್ಕಿದೆ. ಆದರೆ ಇದನ್ನು ಸಾರ್ವಜನಿಕ ಬಳಕೆಗೆ ಇದುವರೆಗೆ ನೀಡಲಾಗಿಲ್ಲ.
