ಕೆಆರ್ಪುರ, ಜ.3- ಸಿಎಂ ಸಿದ್ದರಾಮಯ್ಯನವರ ಜನತಾ ದರ್ಶನ ಮಾದರಿಯಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಗರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜನತಾ ದರ್ಶನ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸುವ ಪ್ರಯತ್ನ ನಡೆಸಿದರು.
ಮೊದಲ ಹಂತದಲ್ಲಿ ಕೆ.ಆರ್.ಪುರಂನಲ್ಲಿ ಬಾಗಿಲಿಗೆ ಬಂತು ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ, ಅಹವಾಲು ನಿಮ್ಮದು ಪರಿಹಾರ ನಮ್ಮದು ಎಂಬ ಧ್ಯೇಯ ವಾಕ್ಯದೊಂದಿಗೆ ಜನತಾ ದರ್ಶನ ಆಯೋಜಿಸಲಾಗಿತ್ತು.
ಶಾಸಕ ಭೈರತಿ ಬಸವರಾಜ್, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಜೀವ್ ಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಜನರ ಕಷ್ಟಗಳನ್ನು ನಿವಾರಿಸಲು ಮನೆ ಬಾಗಿಲಿಗೆ ಸರ್ಕಾರ ಬಂದಿದ್ದು ಸಮಸ್ಯೆ ಹೇಳಿ ಪರಿಹಾರ ಪಡೆಯಿರಿ ಎಂದು ಕರೆ ನೀಡಿದರು. ಬೆಂಗಳೂರು ನಗರದಲ್ಲಿ ನೀರು, ಕಸ, ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದ್ದು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಶಾಸಕರಾದ ಬೈರತಿ ಬಸವರಾಜ ಹಾಗೂ ಮಂಜುಳಾ ಅರವಿಂದ ಲಿಂಬಾವಳಿ ಅವರು ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಫ್ಲೈಓವರ್ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ಆದಷ್ಟು ಬೇಗ ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಬೆಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸಲು ಕಸ ಸುಡುವುದು, ಗ್ಯಾಸ್ ತಯಾರಿಕೆ ಮಾಡುವುದು, ಮಾಡಲಾಗುವುದು ಈಗಾಗಲೇ ನಾಲ್ಕು ಟೆಂಡರ್ ಕರೆದಿದ್ದು ಇನ್ನು ನಾಲ್ಕು ಟೆಂಡರ್‍ಗಳನ್ನು ಕರೆಯಲಾಗುವುದು ಎಂದು ತಿಳಿಸಿದರು. ರಾಜಕಾಲುವೆ ಪಕ್ಕದಲ್ಲಿ 150 ಮೀಟರ್ ಯಾವ ಕಟ್ಟಡವನ್ನು ನಿರ್ಮಾಣ ಮಾಡುವಂತಿಲ್ಲ. ಸಾರ್ವಜನಿಕರು ಓಡಾಡೋಕೆ ಅವಕಾಶ ಕಲ್ಪಿಸಲಾಗುತ್ತಿದೆ. ಸಾಕಷ್ಟು ತೆರಿಗೆ ಸೋರಿಕೆಯಾಗುತ್ತಿದೆ, ತೆರಿಗೆ ಕಟ್ಟಿದರೆ ಅಭಿವೃದ್ದಿ ಸಾಧ್ಯ, ಎಲ್ಲರೂ ತೆರಿಗೆ ಪಾವತಿಸಿ ಎಂದು ಸಲಹೆ ನೀಡಿದರು.
ಮನೆ ಬಾಗಿಲಿಗೆ ಖಾತೆ ನೀಡುವ ಕೆಲಸ ಒಂದು ವರ್ಷದಲ್ಲಿ ಮಾಡುತ್ತೇವೆ. ಯಾರಿಗೂ ಒಂದು ರೂಪಾಯಿ ಕೊಡಬೇಡಿ ಎಂದು ಹೇಳಿದರು. ನಮ್ಮ ಸರ್ಕಾರ ನೀಡಿರುವ ಅನ್ನಭಾಗ್ಯ ಅಕ್ಕಿಯನ್ನು ಮಂತ್ರಾಕ್ಷತೆಯಾಗಿ ಪರಿವರ್ತನೆ ಮಾಡಿ ಎಲ್ಲಾ ಕಡೆ ಹಂಚಾಲಾಗುತ್ತಿದೆ ಎಂದು ಅಯೋಧ್ಯೆಯ ಮಂತ್ರಾಕ್ಷತೆ ಬಗ್ಗೆ ಕಿಚಾಯಿಸಿದರು.
ಶಾಸಕ ಬೈರತಿ ಬಸವರಾಜ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಕಳೆದ ಸರ್ಕಾರದಲ್ಲಿ ಹಳೆ ಮದ್ರಾಸ್ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ 350 ಕೋಟಿ ರೂ. ಮೀಸಲಿರಿಸಿ ಎಲ್ಲಾ ರೀತಿಯ ಪ್ಲಾನ್‍ಗಳನ್ನು ತಯಾರಿಸಿ ರೆಡಿ ಮಾಡಿದ್ದೆವು. ಆದರೆ ಇದೀಗ ಅದನ್ನು ಸ್ಥಗಿತಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಎಲ್ಲೂ ಪ್ರಸ್ತಾಪ ಮಾಡಿಲ್ಲ, ಲಕ್ಷಾಂತರ ವಾಹನ ಸಂಚರಿಸುವ ರಸ್ತೆ ಇದಾಗಿದೆ. ವಾಹನ ದಟ್ಟಣೆ ಹೆಚ್ಚಾಗಿದೆ. ಆದಷ್ಟು ಬೇಗ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಬೇಕಿದೆ ಎಂದು ಹೇಳಿದರು.
ಕೆಆರ್‍ಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಕೆರೆಗಳು ಅಭಿವೃದ್ಧಿಯಾಗಬೇಕಿದೆ. ಬೃಹತ್ ನೀರುಗಾಲುವೆಗಳಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. 60 ಕಿ.ಮೀನಷ್ಟು ಬೃಹತ್ ನೀರುಗಾಲುವೆಯಲ್ಲಿ ನೀರು ಹರಿದು ಹೋಗುತ್ತದೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.
2023ರಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ 68518 ಅಪರಾಧ ಪ್ರಕರಣಗಳು ದಾಖಲು
ಕಳೆದ ಸರ್ಕಾರದಲ್ಲಿ ನೀಡಿದ್ದ ಅನುದಾನದಲ್ಲಿ ನಡೆಯುತ್ತಿದ್ದ ಕಾಮಗಾರಿ ಪೇಮೆಂಟ್ ನೀಡದೆ ಸ್ಥಗಿತಗೊಳಿಸಿದ್ದೀರಿ ರಿಲೀಸ್ ಮಾಡಿಸಬೇಕು ಎಂದರು. ಉದಯನಗರ ಬಳಿ ಬೆನ್ನಗಾನಹಳ್ಳಿ ಮೆಟ್ರೋ ಎಂದು ಸ್ಟೇಷನ್ ಎಂದು ಹಾಕಿದ್ದಾರೆ ಅದನ್ನು ತೆಗೆಸಿ ಉದಯನಗರ ಸ್ಟೇಷನ್ ಎಂದು ಹೆಸರಿಡಲು ಅನುಮೋದನೆ ನೀಡಬೇಕು ಎಂದು ಹೇಳಿದರು.
ವಿದ್ಯುತ್ ದೀಪಗಳ ಅಳವಡಿಕೆಗೆ ಅನುದಾನ ನೀಡಬೇಕು, ಹೆಚ್ಚಿನ ಪೌರಕಾರ್ಮಿಕರ ನೇಮಕ ಆಗಬೇಕು, ಕಗ್ಗದಾಸಪುರ ರೈಲ್ವೆ ಸೇತುವೆ ಸ್ಥಗಿತಗೊಳಿಸಲಾಗಿದೆ ಅದಕ್ಕೆ ಅನುಮೋದನೆ ನೀಡಬೇಕು. ಮೆಟ್ರೋ ಕಾಮಗಾರಿಯಿಂದ ರಸ್ತೆ ಹಾಳಾಗಿದೆ, ಸರಿಪಡಿಸಿಕೊಡಬೇಕು ಎಂದು ಹೇಳಿದರು.
ರಾಮಮಂದಿರಕ್ಕೆ ಬಿಗಿ ಭದ್ರತೆಗೆ ವಿಶೇಷ ಪೊಲೀಸ್ ಪಡೆ ನಿಯೋಜನೆ
ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಮಾತನಾಡಿ, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಹೇಳಿದರು. ಕಸ ಡಂಪಿಂಗ್ ಮಾಡಿದ್ದ ಜಾಗದ ಸುತ್ತಮುತ್ತಲ ಹಳ್ಳಿಗಳಲ್ಲಿ ಸ್ಪ್ರೇ ಮಾಡಬೇಕು, ರಾಜಕಾಲುವೆಗಳಲ್ಲಿ ಹೂಳೆತ್ತಬೇಕಿದೆ, ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಅದನ್ನು ಚುರುಕುಗೊಳಿಸಬೇಕು ಎಂದರು. ಮಹದೇವಪುರ ಕ್ಷೇತ್ರದಲ್ಲಿ ಬಡವರು ಹೆಚ್ಚಾಗಿ ವಾಸಿಸುತ್ತಿದ್ದು ಅವರಿಗೊಂದು ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮೋಹನ್‍ಬಾಬು, ಎಂ.ಎಲ್.ಸಿ ನಾರಾಯಣಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.