ಬೆಂಗಳೂರು, ಜ.3- ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನವನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ನಾವಿನ್ನೂ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ನಡೆಯುತ್ತಿರುವ ರಾಜಕೀಯ ನಾಟಕ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಈಗಾಗಲೇ ಗೃಹ ಸಚಿವರು ಸ್ಪಷ್ಟ ಪಡಿಸಿದ್ದಾರೆ. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ಬಾಕಿ ಇದ್ದ ಪ್ರಕರಣಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಅಗೌರವ ತರುವವರು ಮತ್ತು ಅಶಾಂತಿ ಸೃಷ್ಟಿಸುವವರ ವಿರುದ್ಧ ಮೊದಲಿನಿಂದಲೂ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಈಗಲೂ ಕ್ರಮ ಕೈಗೊಂಡಿದ್ದಾರ ಎಂದರು.
ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶಾಂತಿ-ಸೌಹಾರ್ದತೆಯ ಸಂದೇಶಕ್ಕೆ ಒತ್ತು: ಸಿದ್ದರಾಮಯ್ಯ
ಬಿಜೆಪಿಯವರಿಗೆ ಏಳು ತಿಂಗಳು ವಿರೋಧ ಪಕ್ಷದ ನಾಯಕನನ್ನು ಮಾಡಲಾಗಲಿಲ್ಲ. ಈಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ನಾವೇನೋ ಬಹಳ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಪ್ರಜಾಪ್ರಭುತ್ವದಲ್ಲಿ ಜನರೂ ಉತ್ತರ ನೀಡುತ್ತಾರೆ, ನಾವು ಉತ್ತರಿಸುತ್ತೇವೆ ಎಂದರು.
ನಾವು ಬಿಜೆಪಿಯವರಂತೆ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಅವರು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಷ್ಟು ಕೇಸು ಹಾಕಿದ್ದಾರೆ ಎಂದು ಗೋತ್ತಿದೆ. ಹುಬ್ಬಳ್ಳಿಯಲ್ಲಿ, ಬೆಂಗಳೂರಿನಲ್ಲೇ ಬಹಳಷ್ಟು ಕೇಸುಗಳನ್ನು ದಾಖಲಿಸಿದ್ದಾರೆ. ಅಮಾಯಕರ ಮೇಲೂ ಕೇಸುಗಳನ್ನು ಹಾಕಲಾಗಿದೆ. ನಾವು ಆ ರೀತಿ ಮಾಡಿಲ್ಲ ಎಂದರು.
ವಿರೋಧ ಪಕ್ಷದ ನಾಯಕರು ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಹೋಗಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಹೋಗಿ ಕಟ್ಟಿ ಹಾಕಿಕೊಳ್ಳಲಿ. ಆರ್.ಅಶೋಕ್ ಅವರು ಗೃಹ ಸಚಿವರಾಗಿದ್ದಾಗ ಏನು ಮಾಡಿದ್ದರು. ಪೊಲೀಸರು ಮತ್ತು ಅಧಿಕಾರಿಗಳಿಗೆ ಬಿಜೆಪಿಯ ಕೇಸರಿ ಬಟ್ಟೆ ಹಾಕಿಸಿ ನಿಲ್ಲಿಸಿದ್ದರು. ನಾವು ಆ ಕೆಲಸ ಮಾಡಿಲ್ಲ ಎಂದರು.
ತಮ್ಮ ಮೇಲಿರುವ ಅಕ್ರಮ ಆಸ್ತಿ ಪ್ರಕರಣದ ಲೋಕಾಯುಕ್ತ ತನಿಖೆಗೆ ಸಂಬಂಧ ಪಟ್ಟಂತೆ ನನಗಿನ್ನೂ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೆ ಉತ್ತರ ನೀಡುತ್ತೇನೆ ಎಂದರು.