ಬೆಂಗಳೂರು, ಏ.19-ಪೂರ್ವ ಮುಂಗಾರು ಮಳೆ ದುರ್ಬಲಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಬೇಸಿಗೆ ಬಿಸಿಲ ತೀವ್ರತೆ ನಿರಂತರವಾಗಿ ಏರತೊಡಗಿದ್ದು, ಜನರು ತತ್ತರಿಸುವಂತಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗರಿಷ್ಠ ತಾಪಮಾನ ಗಣನೀಯವಾಗಿ ಏರಿಕೆಯಾಗಿದೆ.
ಉತ್ತರ ಒಳನಾಡು ಜಿಲ್ಲೆಗಳಲ್ಲಿ ಏ.21ರವರೆಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ವಾತಾವರಣದಲ್ಲಿ ಬಿಸಿಗಾಳಿ ಹೆಚ್ಚಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಆಲಿಕಲ್ಲು ಮಳೆ ಮುನ್ಸೂಚನೆ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದಂತಾಗಿದೆ.
ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದ್ದು, ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಾಗಲಿದೆ. ಕೆಲವೆಡೆ ಮಿಂಚು, ಗುಡುಗಿನ ಆರ್ಭಟದೊಂದಿಗೆ ಮಳೆಯಾಗಲಿದೆ. ಹೀಗಾಗಿ ರಾಜ್ಯದ ಉತ್ತರ ಒಳನಾಡಿನ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಒಣ ಹವೆ ಮುಂದುವರೆಯಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಮಾರ್ಚ್ ತಿಂಗಳಲ್ಲಿ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿ ಅಪಾರ ಪ್ರಮಾಣದ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದವು.
ಈಗಾಗಲೇ ರಾಜ್ಯದಲ್ಲಿ ಗರಿಷ್ಠ ತಾಪಮಾನ 35 ಡಿ.ಸೆ.ಗಿಂತ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ 40 ಡಿ.ಸೆ.ಗಿಂತ ಅ ಕವಾಗಿದೆ. ರಾಯಚೂರು ಸೇರಿದಂತೆ ಕೆಲವೆಡೆ 42, 43 ಡಿ.ಸೆ. ನಷ್ಟು ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಬೆಂಗಳೂರಿನಲ್ಲೂ 36, 37 ಡಿ.ಸೆ. ನಷ್ಟು ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ನಿರೀಕ್ಷಿತ ಪ್ರಮಾಣದಲ್ಲಿ ಬೇಸಿಗೆ ಮಳೆಯಾಗದಿರುವುದು ತಾಪಮಾನ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಹಗಲು ಮತ್ತು ರಾತ್ರಿ ವೇಳೆ ಸೆಖೆ ಹೆಚ್ಚಾಗಿರುವುದರಿಂದ ಹೆಚ್ಚು ದ್ರವ ಪದಾರ್ಥ ಹಾಗೂ ತಂಪು ಪಾನೀಯಗಳನ್ನು ಸೇವಿಸಲು ವೈದ್ಯರು ಸಲಹೆ ಮಾಡಿದ್ದಾರೆ.
