Sunday, September 8, 2024
Homeರಾಜ್ಯಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಎ.ಎಚ್‌.ಆನಂದ್‌ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ

ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಎ.ಎಚ್‌.ಆನಂದ್‌ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ

ಬೆಂಗಳೂರು,ಮೇ.3- ಈ ಬಾರಿ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎ.ಎಚ್‌.ಆನಂದ್‌ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.ಈ ಕ್ಷೇತ್ರವನ್ನು ಕಳೆದ ಬಾರಿ ಪ್ರತಿನಿಧಿಸಿದ್ದ ಹಾಲಿ ವಿಧಾನಪರಿಷತ್‌ ಸದಸ್ಯ ಅ.ದೇವೇಗೌಡ ಅವರಿಗೆ ಎರಡನೇ ಬಾರಿಗೆ ಟಿಕೆಟ್‌ ನೀಡಲು ಬಿಜೆಪಿ ಒಲವು ತೋರಿಲ್ಲ.

ಬಿಜೆಪಿಯ ಭದ್ರಕೋಟೆ ಎನಿಸಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಮುಖಂಡರೂ ಆಗಿರುವ ಹಾಗೂ ಪಕ್ಷದಲ್ಲಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಎ.ಎಚ್‌.ಆನಂದ್‌ ಅವರಿಗೆ ಟಿಕೆಟ್‌ ನೀಡಲು ಪಕ್ಷವು ಒಲವು ತೋರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಆರ್‌.ಅಶೋಕ್‌ ಸೇರಿದಂತೆ ಪಕ್ಷದ ಎಲ್ಲಾ ನಾಯಕರೂ ಆನಂದ್‌ ಅವರಿಗೆ ಟಿಕೆಟ್‌ ನೀಡಲು ಒಲವು ತೋರಿದ್ದು, ಅವರನ್ನೇ ಅಭ್ಯರ್ಥಿ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ಒಂದೆರೆಡು ದಿನದಲ್ಲಿ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡುವ ಸಾಧ್ಯತೆಯಿದ್ದು, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಒಂದೇ ಹೆಸರನ್ನು ಶಿಫಾರಸ್ಸು ಮಾಡುವ ಸಂಭವವಿದೆ. ಕಳೆದ ಬಾರಿಯೇ ಟಿಕೆಟ್‌ ಆಕಾಂಕ್ಷಿಯಾಗಿದ್ದ ಆನಂದ್‌ ಅವರಿಗೆ ಕೆಲವು ಕಾರಣಗಳಿಂದ ಕೊನೆ ಕ್ಷಣದಲ್ಲಿ ಟಿಕೆಟ್‌ ಕೈ ತಪ್ಪಿತ್ತು. ಆದರೂ ಪಕ್ಷವಿರೋಧಿ ಚಟುವಟಿಕೆ ನಡೆಸದೇ ಪಕ್ಷದ ಸೂಚನೆಯಂತೆ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿದ್ದರು.

ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅನಂತಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆನಂದ್‌ ಅವರು ಎಬಿವಿಪಿ ಮೂಲಕ ಬಿಜೆಪಿಗೆ ಸೇರ್ಪಡೆಯಾಗಿದ್ದು.

ಯಡಿಯೂರಪ್ಪನವರು ಈ ಹಿಂದೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆ, ಬೆಂಗಳೂರಿನಲ್ಲಿ ನಡೆದಿದ್ದ ಹಲವು ರಾಷ್ಟ್ರೀಯ ನಾಯಕರ ಸಮಾವೇಶಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಪಕ್ಷದ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದು.

ಬಿಜೆಪಿಯ ಮಾಧ್ಯಮ ಮುಖ್ಯಸ್ಥರಾಗಿಯೂ ಅನುಭವ ಹೊಂದಿರುವ ಅವರು ಪಕ್ಷ ನೀಡುವ ಎಲ್ಲಾ ಜವಾಬ್ದಾರಿಗಳನ್ನೂ ಅತ್ಯಂತ ಚಾಣಾಕ್ಷತನದಿಂದ ನಿಭಾಯಿಸುವ ಯುವಕನಾಗಿ ಹೊರಹೊಮ್ಮಿದ್ದರು.ಈ ಎಲ್ಲಾ ಅಂಶಗಳನ್ನೂ ಪರಿಗಣಿಸಿ ಬಿಜೆಪಿ ಈ ಬಾರಿ ಆನಂದ್‌ ಅವರಿಗೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ಟಿಕೆಟ್‌ ನೀಡುವುದು ಖಚಿತವಾಗಿದೆ.

ವಿಧಾನಪರಿಷತ್‌ನ ಮೂರು ಶಿಕ್ಷಕರು ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಜೂ.3 ರಂದು ಮತದಾನ ನಡೆದು 6 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.ಮೇ 9 ರಂದು ಅಧಿಸೂಚನೆ ಹೊರಡಿಸಲಿದ್ದು, ಮೇ 16 ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿ, ಮೇ 17 ಪರಿಶೀಲನೆ ಹಾಗೂ ಮೇ 20 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.ಬೆಂಗಳೂರು ಪದವೀಧರ ಕ್ಷೇತ್ರವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಕ್ಷೇತ್ರಗಳನ್ನು ಒಳಗೊಂಡಿದೆ.

RELATED ARTICLES

Latest News