ಬೆಂಗಳೂರು, ಅ.25- ಕಾರಿನ ಬಾಗಿಲನ್ನು ಆಯುಧದಿಂದ ಮೀಟಿ ಹಣ, ವಡವೆಗಳಿದ್ದ ಬ್ಯಾಗ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ರಿಯಲ್ ಎಸ್ಟೇಟ್ ಏಜೆಂಟನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 13.75 ಲಕ್ಷ ರೂ. ಮೌಲ್ಯದ 144 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕೊಕನೆಟ್ ಬ್ರೂಟ್ ಲೇಔಟ್ ನಿವಾಸಿಯೊಬ್ಬರು ಪತಿಯ ಚಿಕಿತ್ಸೆಗಾಗಿ ತಂಗಿಯ ಮಗನ ಜೊತೆ ಬಾಣಸವಾಡಿಯ ಟ್ರೈಲೈಫ್ ಆಸ್ಪತ್ರೆಗೆ ಹೋಗಿದ್ದು, ಆಸ್ಪತ್ರೆ ಬಳಿಯ ಕಿರಿದಾದ ರಸ್ತೆಯಲ್ಲಿ ಕಾರು ನಿಲ್ಲಿಸಿ ಆಸ್ಪತ್ರೆ ಒಳಗೆ ಹೋಗಿದ್ದಾಗ ಇತ್ತ ಕಳ್ಳರು ಕಾರಿನ ಬಾಗಿಲನ್ನು ಯಾವುದೋ ಆಯುಧದ ಮುಖಾಂತರ ತೆಗೆದು ಹಣ ಹಾಗೂ ವಡವೆಗಳಿದ್ದ ಬ್ಯಾಗ್ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಪತಿಗೆ ಚಿಕಿತ್ಸೆ ಕೊಡಿಸಿ ಕಾರಿನ ಬಳಿ ಬಂದಾಗ ಬಾಗಿಲು ತೆಗೆದಿರುವುದು ಗಮನಿಸಿದಾಗ ಒಳಗೆ ಇಟ್ಟಿದ್ದ ಬ್ಯಾಗ್ ಕಳವಾಗಿರುವುದು ಕಂಡು ಬಂದಿದೆ. ಅವರು ಪೊಲೀಸರಿಗೆ ಅವರು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಈಜಿಪುರ ಮುಖ್ಯರಸ್ತೆಯ ಎರಡನೇ ಕ್ರಾಸ್‌ನ ಟೀ ಅಂಗಡಿಯೊಂದರ ಮುಂಭಾಗ ಆರೋಪಿ, ನಗರದ ನಿವಾಸಿ ರಿಯಲ್ ಎಸ್ಟೇಟ್ ಏಜೆಂಟನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿ ದ್ದಾನೆ.
ಕಳವು ಮಾಡಿದ್ದ ಹಣ ಮತ್ತು ವಡವೆಗಳನ್ನು ತನ್ನ ಕಾರಿನಲ್ಲಿ ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಈಜಿಪುರ ಮುಖ್ಯರಸ್ತೆಯಲ್ಲಿ ಆರೋಪಿಯ ಕಾರನ್ನು ವಶಕ್ಕೆ ಪಡೆದು 2 ಲಕ್ಷ ಹಣ ಮತ್ತು ಆಭರಣಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬಾಣಸವಾಡಿ ಇನ್‌್ಸಪೆಕ್ಟರ್ ಅರುಣ್ ಸಾಳುಂಕೆ ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.