ಬೆಂಗಳೂರು,ಏ.20- ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ಕೊಲೆಗೆ ಪ್ರೀತಿ ಕಾರಣ ಎಂದು ಹೇಳಿಕೆ ನೀಡಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಗೆ ಇಂದು ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಸದಾಶಿವನಗರದ ಗೃಹಸಚಿವರ ಮನೆಯವರೆಗೆ ಬ್ಯಾನರ್ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದ ಎಬಿವಿಪಿ ಕಾರ್ಯಕರ್ತರು ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ಕಿತ್ತೆಸೆದು, ತುಳಿದು ತಮ್ಮ ಆಕ್ರೋಶ ಹೊರಹಾಕಿದರು.
ಸಚಿವರ ಮನೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸಲು ಪರದಾಡಬೇಕಾಯಿತು. ಈ ವೇಳೆ ಮನೆಯ ಮುಂದೆ ಧರಣಿ ನಡೆಸಿದ ಕಾರ್ಯಕರ್ತರು, ಸಚಿವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಲ್ಲದೆ, ಆರೋಪಿಗೆ ಗಲ್ಲುಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೊಲೆಯಾದ ನೇಹಾ ಮತ್ತು ಆರೋಪಿ ಫಯಾಜ್ ನಡುವೆ ಪರಸ್ಪರ ಪ್ರೀತಿ ಇತ್ತು ಎಂದು ಗೃಹಸಚಿವರು ಹೇಳಿದ್ದರು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ. ಹುಬ್ಬಳ್ಳಿ ಕೊಲೆ ಪ್ರಕರಣದಲ್ಲಿ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಆರಂಭದಲ್ಲಿ ಸಚಿವರ ಮನೆಯ ಬಳಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆಯಿತ್ತು. ಕಾರ್ಯಕರ್ತರ ಪ್ರತಿಭಟನೆ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿದೆ.