ಬೆಂಗಳೂರು, ಏ.3- ಜೈಲಿನಿಂದ ಬಿಡುಗಡೆಯಾದ 24 ಗಂಟೆಯೊಳಗೆ ವೃದ್ಧ ದಂಪತಿಗೆ ಆಮಿಷವೊಡ್ಡಿ ಹಣ- ಆಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿ 24 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಗುರುಪ್ಪನ ಪಾಳ್ಯ ನಿವಾಸಿ ಅಬ್ದುಲ್ಲಾ (43) ಬಂಧಿತ ಆರೋಪಿ. ಈತನನ್ನು ಈ ಹಿಂದೆ ತಿಲಕ್‍ನಗರ ಠಾಣಾ ಪೊಲೀಸರು ಬಂದ್ದರು. ಜೈಲಿನಿಂದ ಮಾ.25ರಂದು ಬಿಡುಗಡೆ ಹೊಂದಿ ಹೊರಬಂದ ಮಾರನೇ ದಿನವೇ ತನ್ನ ಹಳೆಚಾಳಿ ಮುಂದುವರೆಸಿ ಕೃತ್ಯ ವೆಸಗಿದ್ದಾನೆ. ಆನೇಪಾಳ್ಯದ 4ನೇ ಕ್ರಾಸ್ ಬಳಿ ಮಾ.26ರಂದು ರಶೀದ್ (70) ಮತ್ತು ಅಖಿಲಾ (65) ದಂಪತಿ ನಿಂತಿದ್ದಾಗ ಆರೋಪಿ ಇವರ ಬಳಿ ಹೋಗಿ ನಿಮಗೆ ರಂಜಾನ್ ಕಿಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದಾನೆ.
ಕಿಟ್ ಆಸೆಗಾಗಿ ಆರೋಪಿಯ ಜೊತೆಗೆ ದ್ವಿಚಕ್ರವಾಹನದಲ್ಲೇ ರಶೀದ್ ಹೋಗಿದ್ದಾರೆ. ಆರೋಪಿ ಸ್ವಲ್ಪ ದೂರ ಕರೆದೊಯ್ದು ಜನನಿಬಿಡ ಸ್ಥಳದಲ್ಲಿ ಚಾಕು ತೋರಿಸಿ ಬೆದರಿಸಿ 5 ಸಾವಿರ ಹಣ ಸುಲಿಗೆ ಮಾಡಿ ಅವರನ್ನು ಅಲ್ಲಿಯೇ ಬಿಟ್ಟು ವಾಪಸ್ ಅಖಿಲಾ ಅವರ ಬಳಿ ಬಂದಿದ್ದಾನೆ.
ರೇಷನ್ ಕಿಟ್ ಅವರೊಬ್ಬರಿಂದ ತರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರನ್ನು ಅಲ್ಲಿಯೇ ಬಿಟ್ಟು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿರುವುಗಾಗಿ ಅಖಿಲಾ ಅವರನ್ನು ನಂಬಿಸಿ ತನ್ನ ದ್ವಿಚಕ್ರವಾಹನದಲ್ಲೇ ಕೂರಿಸಿಕೊಂಡು ಸುಬ್ಬಣ್ಣ ಗಾರ್ಡನ್ ಬಳಿ ಕರೆದೊಯ್ದಿದ್ದಾನೆ.
ಬಳಿಕ ಅವರಿಗೂ ಚಾಕು ತೋರಿಸಿ ಕಿರುಚಾಡದಂತೆ ಬೆದರಿಸಿ ಅವರು ಧರಿಸಿದ್ದ 14 ಗ್ರಾಂ ಸರ, 7ಗ್ರಾಂ ಕಿವಿಯೋಲೆ ಮತ್ತು 400 ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದನು.ದಂಪತಿ ಬಳಿ ಫೋನ್ ಇಲ್ಲದ ಕಾರಣ ಒಬ್ಬರನ್ನೊಬ್ಬರು ಮಾತನಾಡಿಸಲು ಸಾಧ್ಯವಾಗಿಲ್ಲ. ಬಳಿಕ ಮನೆಗೆ ಹೋದಾಗ ಇಬ್ಬರೂ ಮೋಸ ಹೋಗಿರುವುದು ಅರಿತು ತಕ್ಷಣ ಅಶೋಕ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೋಸ ಮಾಡಿದ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿದ್ದಂತಹ ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಆರೋಪಿ ಕಳೆದ ಮೂರು ತಿಂಗಳ ಅವಯಲ್ಲಿ ಎಂಟಕ್ಕೂ ಹೆಚ್ಚು ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.