ಬೆಂಗಳೂರು, ಡಿ.13- ರಾಜಭವನದ ಮುಂದೆ ನಡೆದು ಹೋಗುತ್ತಿದ್ದಾಗ ಪೊಲೀಸರು ಇರುವುದು ಗಮನಿಸಿ ತಮಾಷೆ ಹಾಗೂ ಕುತೂಹಲಕ್ಕಾಗಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾಗಿ ಪೊಲೀಸರ ಮುಂದೆ ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ. ಬಿಕಾಂ ಪದವೀಧರನಾಗಿರುವ ಆರೋಪಿ ಭಾಸ್ಕರ್ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ವಡ್ಡಳ್ಳಿ ಗ್ರಾಮದವನಾಗಿದ್ದು, ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದಾನೆ.
ಮೊನ್ನೆ ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಈತ ರಾಜಭವನದ ಮುಂದೆ ನಡೆದು ಹೋಗುವಾಗ ಪೊಲೀಸರು ಭಾರೀ ಭದ್ರತೆಯಲ್ಲಿರುವುದು ಗಮನಿಸಿ ಕುತೂಹಲಕ್ಕಾಗಿ ಮೊಬೈಲ್ನಿಂದ ಗೂಗಲ್ನಲ್ಲಿ ಎನ್ಐಎ ಸಹಾಯವಾಣಿ ನಂಬರ್ ಹುಡುಕಿ ನಂತರ ಕರೆ ಮಾಡಿ ಬಾಂಬ್ ಇರಿಸಿರುವುದಾಗಿ ಹೇಳಿ ಮೊಬೈಲ್ ಸ್ಥಗಿತಗೊಳಿಸಿದ್ದನು. ಈತನ ಒಂದು ಹುಸಿ ಕರೆಯಿಂದ ಪೊಲೀಸರು ನಿದ್ದೆಗೆಡುವಂತಾಗಿತ್ತು. ಆರೋಪಿಯು ನಂತರ ಮೆಜೆಸ್ಟಿಕ್ಗೆ ಹೋಗಿ ಅಲ್ಲಿಂದ ಆಂಧ್ರಪ್ರದೇಶದ ಚಿತ್ತೂರಿಗೆ ಬಸ್ನಲ್ಲಿ ಹೋಗಿದ್ದನು.
BIG NEWS : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು..!
ಅಲ್ಲಿನ ದೇವಸ್ಥಾನವೊಂದರ ಬಳಿ ಅನುಮಾನಾಸ್ಪದವಾಗಿ ಆರೋಪಿ ತಿರುಗಾಡುತ್ತಿದ್ದಾಗ ಅನುಮಾನಗೊಂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ಮೊಬೈಲ್ ಪರಿಶೀಲಿಸಿದಾಗ, ಈತನೇ ರಾಜಭವನಕ್ಕೆ ಹುಸಿ ಬಾಂಬ್ ಕರೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕುತೂಹಲಕ್ಕೆ ಕರೆ ಮಾಡಿದ್ದಾಗಿ ತಿಳಿಸಿದ್ದಾನೆ. ಬಾಂಬ್ ಕರೆ ಬಂದಾಗ ಪೊಲೀಸರು ಎಷ್ಟರ ಮಟ್ಟಿಗೆ ಅಲರ್ಟ್ ಆಗುತ್ತಾರೆ ಎಂಬುದನ್ನು ತಿಳಿಯಲು ಕರೆ ಮಾಡಿದೆ ಎಂದು ವಿಚಾರಣೆಯ ಸಮಯದಲ್ಲಿ ಆರೋಪಿ ಹೇಳಿದ್ದಾನೆ.