Thursday, May 2, 2024
Homeರಾಜ್ಯಜಮೀರ್ ಹೇಳಿಕೆ ಖಂಡಿಸಿ ಮೇಲ್ಮನೆಯಲ್ಲಿ ಸಭಾತ್ಯಾಗ

ಜಮೀರ್ ಹೇಳಿಕೆ ಖಂಡಿಸಿ ಮೇಲ್ಮನೆಯಲ್ಲಿ ಸಭಾತ್ಯಾಗ

ಬೆಳಗಾವಿ,ಡಿ.13- ತೆಲಂಗಾಣ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ಪೀಕರ್ ಸ್ಥಾನದ ಬಗ್ಗೆ ಬಿಜೆಪಿಯವರಿಗೆ ನೀಡಿದಂತಹ ವಿವಾದಾತ್ಮಕ ಹೇಳಿಕೆ ವಿಧಾನಪರಿಷತ್ನಲ್ಲಿಂದು ಭಾರೀ ಗದ್ದಲ ಉಂಟು ಮಾಡಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದ ಪ್ರಸಂಗ ಜರುಗಿತು.ಪ್ರಶ್ನೋತ್ತರ ಸಂದರ್ಭದಲ್ಲಿ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಅವರು ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ರಾಜ್ಯದಲ್ಲಿ ಮುಂಬೈ ಕೊಳಗೇರಿ ಪುನರ್ವಸತಿ ಪ್ರಾಕಾರದ ವತಿಯಿಂದ ವಸತಿ ಸಂಕೀರ್ಣ ರಚಿಸುವ ಕುರಿತು ಪ್ರಶ್ನೆ ಕೇಳಿದರು.


ಈ ವೇಳೆ ಜಮೀರ್ ಅವರು ಉತ್ತರ ನೀಡಲು ಮುಂದಾಗುತ್ತಿದ್ದಂತೆ ಈ ವೇಳೆ ಕೋಟಾ ಶ್ರೀನಿವಾಸ್ ಪೂಜಾರಿ, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರ ಸದಸ್ಯರು ಜಮೀರ್ ವಿರುದ್ಧ ತಿರುಗಿ ಬಿದ್ದರು.ಸಭಾಪತಿ ಪೀಠಕ್ಕೆ ಅವರು ಅಗೌರವ ತೋರಿದ್ದಾರೆ ಇಂಥವರಿಂದ ಉತ್ತರ ಕೊಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದರಿಂದಾಗಿ ಇಡೀ ಸದನದ ಕ್ಕೇ ತಪ್ಪಿ ಹೋಯಿತು.ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಾಡಿದ ಪ್ರಯತ್ನ ಫಲ ನೀಡದ ಕಾರಣ ಅಂತಿಮವಾಗಿ ಸದನವನ್ನು ಎರಡು ಬಾರಿ ಮುಂದೂಡಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದರಾದರೂ ಬಿಜೆಪಿ ಸದಸ್ಯರು ಸಭಾ ತ್ಯಾಗ ಮಾಡಿದರು.


ತಮ್ಮ ಹೇಳಿಕೆಯನ್ನು ಸದನದಲ್ಲಿ ಬಲವಾಗಿ ಸಮರ್ಥಿಸಿಕೊಂಡ ಜಮೀರ್, ನಾನು ಎಲ್ಲಿಯೂ ಸಭಾಪತಿ ಸ್ಥಾನಕ್ಕೆ ಅಗೌರವ ತೋರಿಲ್ಲ. ತೋರಿಸುವುದೂ ಇಲ್ಲ. ಮುಂದೆಯೂ ಕೂಡ ಆ ರೀತಿ ನಡೆದುಕೊಳ್ಳುವುದಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾನು ಏನು ಹೇಳಿದ್ದೇನೆ ಎಂದು ಮೊದಲು ಸರಿಯಾಗಿ ನೀವೇ ನೋಡಿ ಎಂದು ಸವಾಲು ಹಾಕಿದರು.

ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ನಾನು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 17 ಮುಸ್ಲಿಮರಿಗೆ ಟಿಕೆಟ್ ನೀಡಿದ್ದರು. ನಾನು, ರಹೀಮ್ ಖಾನ್ ಸಚಿವರಾದರೆ, ಸಲೀಂ ಅಹ್ಮದ್ ಮುಖ್ಯ ಸಚೇತಕರಾಗಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯು.ಟಿ.ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿದಂತೆ ಬಿಜೆಪಿಯವರು ಅವರಿಗೆ ಎದ್ದು ನಿಂತು ನಮಸ್ಕರಿಸುತ್ತಾರೆ. ಇಂಥ ನ್ಯಾಯ ಒದಗಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಈ ವೇಳೆ ಸಭಾ ನಾಯಕ ಭೋಸ್ರಾಜ್ ಅವರು, ಜಮೀರ್ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿರುವುದರಿಂದ ಪುನಃ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅಲ್ಲದೆ ಅವರು ಕೆಳಮನೆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಸಚಿವರು ನಾನು ಪೀಠಕ್ಕೆ ಅಗೌರವ ಕೊಟ್ಟಿಲ್ಲ ಎಂದು ಸ್ಪಷ್ಟನೆ ಕೊಟ್ಟಾಗ ಪುನಃ ಕಲಾಪಕ್ಕೆ ಅಡ್ಡಿಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ಪ್ರಾರಂಭವಾಯಿತು. ಪರಿಸ್ಥಿತಿ ತಹಬದಿಗೆ ಬರದ ಕಾರಣ ಸಭಾಪತಿಗಳು 10 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.ಪುನಃ ಸದನ ಸೇರಿದಾಗ ಬಿಜೆಪಿಯವರು ತಮ್ಮ ಆಕ್ಷೇಪವನ್ನು ಮುಂದುವರೆಸಿದರು. ಆಗ ಜೆಡಿಎಸ್ನ ಮರಿತಿಬ್ಬೇ ಗೌಡ ಅವರು ಮಾತನಾಡಿ, ಸದನ ಉಳಿದಿರುವುದೇ ಮೂರೇ ದಿನ. ಈ ಕಲಾಪವನ್ನು ಕರೆದಿರುವ ಉದ್ದೇಶವೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಪರಿಹಾರ ಸಿಗಬೇಕು ಎಂಬ ಉದ್ದೇಶದಿಂದ.

ಈಗಾಗಲೇ ಸಚಿವರು ಸ್ಪಷ್ಟನೆ ಕೊಟ್ಟಿರುವುದರಿಂದ ಪುನಃ ಪ್ರಶ್ನೆ ಮಾಡುವ ಅಗತ್ಯವಿಲ್ಲ. ಪ್ರಶ್ನೋತ್ತರ ಕಲಾಪವನ್ನು ಆರಂಭಿಸಿ ಎಂದರು.
ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಪ್ರಕರಣ ಸಂಬಂಧ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿಕೆ ನೀಡಿದ ನಂತರವೂ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಒಂದೇ ವಿಷಯವನ್ನು ಮುಂದಿಟ್ಟುಕೊಂಡು ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದರೆ ಅದು ಯಾರಿಗೂ ಶೋಭೆ ತರುವುದಿಲ್ಲ. ಪ್ರತಿಷ್ಠೆಯನ್ನು ಬಿಟ್ಟು ಕಲಾಪ ನಡೆಯಲು ಎಲ್ಲರೂ ಸಹಕಾರ ಕೊಡಬೇಕು. ಈ ವಿಷಯವನ್ನು ಪೀಠದಲ್ಲಿರುವ ನೀವೇ ನಿರ್ಧಾರ ಮಾಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು.


ಈ ಹಂತದಲ್ಲಿ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅವರು, ಜಮೀರ್ ಎಲ್ಲಿಯೂ ಪೀಠಕ್ಕೆ ಅಗೌರವ ಆಗುವ ರೀತಿಯಲ್ಲಿ ಮಾತನಾಡಿಲ್ಲ. ನಮಗೆ ಅಪಾರವಾದ ಗೌರವವಿದೆ ಎಂದು ಹೇಳಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲ ಮುಸ್ಲಿಂ ಸಮುದಾಯಕ್ಕೆ 17 ಮಂದಿಗೆ ಟಿಕೆಟ್ ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ ನಮಗೆ ಎಷ್ಟು ಸ್ಥಾನಮಾನ ನೀಡಿದ್ದಾರೆ ಎಂದು ಹೇಳಿದ್ದಾರೆ. ಸುಖಾಸುಮ್ಮನೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ ಎಂದರು.

ಸಚಿವರ ಹೇಳಿಕೆಗೆ ಆಕ್ಷೇಪಿಸಿದ ಜೆಡಿಎಸ್ನ ಭೋಜೇಗೌಡ ಮತ್ತು ಶರವಣ ಅವರು, ಲಕ್ಷ್ಮಿಗೂ ಗೂಬೆ ಎಂದು ಕರೆಯುತ್ತಾರೆ. ಹಾಗಾದರೆ ಮನೆಯಲ್ಲಿ ಇದನ್ನೇ ಹೇಳುತ್ತೀರಾ? ಮೊದಲು ಇದನ್ನು ಕಡತದಿಂದ ತೆಗೆದು ಹಾಕುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ನಾನು ಗ್ರಾಮೀಣ ಭಾಷೆಯಲ್ಲಿ ಹೇಳಿದ್ದೇನೆ. ಮಾಡದ ತಪ್ಪಿಗೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಸುರೇಶ್ ಸಮರ್ಥಿಸಿಕೊಂಡರು.

BIG NEWS : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು.

ಗದ್ದಲದ ನಡುವೆಯೂ ಬಿಜೆಪಿಯ ರವಿಕುಮಾರ್ ಅವರು ಜಮೀರ್ ಅವರು ರಾಜ್ಯದ ಮಂತ್ರಿ. ಅವರು ಕೇವಲ ಒಂದು ಸಮುದಾಯಕ್ಕೆ ಸಚಿವರಲ್ಲ. ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ಗೂ ಮತ ಹಾಕುತ್ತಾರೆ, ಬಿಜೆಪಿಗೂ ಹಾಕುತ್ತಾರೆ. ಸ್ಪೀಕರ್ ಸ್ಥಾನಕ್ಕೆ ಪ್ರತಿಯೊಬ್ಬರು ಗೌರವ ಕೊಡಬೇಕು. ಅದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರನ್ನು ನಮಸ್ಕಾರ ಮಾಡುವಂತೆ ಮಾಡಿದ್ದೇವೆ ಎನ್ನುತ್ತಾರೆ. ನಾವು ಮೊದಲು ಆ ಸ್ಥಾನಕ್ಕೆ ಗೌರವ ಕೊಡುತ್ತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.ನಾನು ಹಾಗೆ ಹೇಳಿರಲಿಲ್ಲ ಎಂದು ಜಮೀರ್ ಹೇಳಿದಾಗ, ಹಾಗಾದರೆ ನೀವು ನೀಡಿದ ಹೇಳಿಕೆಯ ವಿಡಿಯೋಗಳನ್ನು ಬಿಡುಗಡೆ ಮಾಡಿ ಎಂದು ಬಿಜೆಪಿಯವರು ಪ್ರತಿ ಸವಾಲು ಹಾಕಿದರು.

ಸಭಾಪತಿಯವರು ಮತ್ತೆ 5 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು. ಬಳಿಕ ಸಭೆ ಸೇರಿದಾಗ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ವೀಕ್ಷಿಸಲು ಶಾಲಾ ಮಕ್ಕಳು ಬಂದಿದ್ದಾರೆ. ಅವರ ಮುಂದೆ ಈ ರೀತಿ ನಡೆದುಕೊಂಡರೆ ನಿಮಗೆ ಮರ್ಯಾದೆ ಇರುತ್ತದೆಯೇ? ಎಲ್ಲರೂ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ, ಎರಡು ಬಾರಿ ಸದನ ಮುಂದೂಡಿದ್ದೇನೆ. ಸಂಬಂಧಪಟ್ಟ ಸಚಿವರು ಉತ್ತರ ನೀಡಿದ್ದಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ದಯಮಾಡಿ ಕಲಾಪ ನಡೆಸಲು ಸಹಕರಿಸಿ ಜಲ್ವಂತ ಸಮಸ್ಯೆಗಳನ್ನು ಚರ್ಚಿಸಬೇಕಿದೆ ಎಂದರು.

ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ನಿಮ್ಮ ಕಛೇರಿಯಲ್ಲಿ ಜಮೀರ್ ಹೇಳಿಕೆ ವಿಡಿಯೋ ತೋರಿಸಿದ್ದೇವೆ. ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಖಾದರ್ಗೆ ಕೈಮುಗಿಯುವಂತೆ ಮಾಡಿದ್ದೇವೆ ಅಂತ ಹೇಳಿದ್ದಾರೆ. ಜಮೀರ್ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಈ ಸದನಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಸರು.

ಬಿಜೆಪಿಯ ರಘುನಾಥ್ ಮಲ್ಕಾಪುರೆ ಮಾತನಾಡಿ, ಜಮೀರ್ ಅಹಮ್ಮದ್ ಕ್ಷಮೆ ಕೇಳಬೇಕು ಇಲ್ಲವೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ನಾವು ಅವರ ಯಾವುದೇ ಪ್ರಶ್ನೆಗಳಿಗೆ ಉತ್ತರವನ್ನು ಬಯಸುವುದಿಲ್ಲ ಬಹಿಷ್ಕಾರ ಮಾಡುತ್ತೇವೆ ಎಂದು ಗುಡುಗಿದರು.ಅಂತಿಮವಾಗಿ ಸಭಾಪತಿಯವರು ಪ್ರಶ್ನೋತ್ತರ ಕಲಾಪ ಆರಂಭಿಸುತ್ತಿದ್ದಂತೆ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆಂದು ಆರೋಪಿಸಿ ಜಮೀರ್ ಅಹಮ್ಮದ್ ವಿರುದ್ಧ ಘೋಷಣೆ ಕೂಗುತ್ತಾ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

RELATED ARTICLES

Latest News