ಬೆಂಗಳೂರು, ಸೆ.23– ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕನ ಮೇಲೆ ಹಾಡಹಗಲೇ ದಾಳಿಮಾಡಿದ ದುಷ್ಕರ್ಮಿ ಏಕಾಏಕಿ ಆ್ಯಸಿಡ್ ಎರಚಿ ಪರಾರಿಯಾ ಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೃಷಾಭಾವತಿ ನಗರದ ಹೊನ್ನಾದೇವಿ ಮೆಡಿಕಲ್ ಸಮೀಪದ 2ನೇ ಕ್ರಾಸ್ ನಿವಾಸಿ ನಾಗೇಶ ಕೊಂಡ (21) ಆ್ಯಸಿಡ್ ದಾಳಿಯಿಂದ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಬುರ್ಗಿಮೂಲದವರಾದ ನಾಗೇಶ ಒಂದು ವರ್ಷದಿಂದ ವೃಷಾಭಾವತಿ ನಗರದಲ್ಲಿ ಮನೆಮಾಡಿಕೊಂಡು ಸ್ನೇಹಿತ ಅವಿನಾಶ್ ಜೊತೆ ವಾಸವಾಗಿದ್ದು, ಅದೇ ಪ್ರದೇಶದಲ್ಲಿರುವ ದಿನೇಶ್ ಎಂಬುವರ ಪೊಲೈನ್ ಇಂಡಸ್ಟ್ರೀಸ್ ಪ್ಯಾಕ್ಟರಿಯಲ್ಲಿ ಫಿಟ್ಟರ್ ಕೆಲಸ ಮಾಡುತ್ತಿದ್ದಾರೆ.
ನಾಗೇಶ ಅವರು 2 ವರ್ಷದ ಹಿಂದೆ ವೈಟ್ಫೀಲ್‌್ಡನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ವಾಸವಿದ್ದ ಮನೆ ಬಳಿ ಯುವತಿಯೊಬ್ಬರ ಪರಿಚಿತವಾಗಿದ್ದು, ಇಬ್ಬರು ಆಗಾಗ್ಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು.
ನಿನ್ನೆ ಕೆಲಸಕ್ಕೆ ರಜೆಯಿದ್ದ ಕಾರಣ ನಾಗೇಶ್ ನಿನ್ನೆ ಮಧ್ಯಾಹ್ನ 1 ಗಂಟೆಗೆ ಸುಮನಹಳ್ಳಿಯಲ್ಲಿನ ಬಾರ್ವೊಂದಕ್ಕೆ ಹೋಗಿ ಮದ್ಯಸೇವಿಸಿ ನಂತರ ಊಟಮಾಡಿಕೊಂಡು ಹೊರಗೆ ಬಂದಿದ್ದಾರೆ.ವೃಷಾಭಾವತಿನಗರದ ಸಣ್ಣಕ್ಕಿ ಬಯಲು, ತೋಟದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾಗೇಶಗೆ ಯುವತಿಯ ಕರೆ ಬಂದಿದ್ದು, ಅವರೊಂದಿಗೆ ಮಾತನಾಡುತ್ತಾ ಹೋಗುವಾಗ ಹಿಂದಿನಿಂದ ಟಾಟಾಸುಮೋ ವಾಹನ ಬಂದಿದ್ದು, ಅದರಲ್ಲಿದ್ದ ವ್ಯಕ್ತಿಯೊಬ್ಬ ಇಳಿದು ಬಂದು ಏಕಾಏಕಿ ಬಾಟಲಿನಲ್ಲಿದ್ದ ಯಾವುದೋ ಕೆಮಿಕಲ್ನ್ನು ಮುಖಕ್ಕೆ ಎರಚಿ ಪರಾರಿಯಾಗಿದ್ದಾನೆ.
ಕೆಮಿಕಲ್ನಿಂದಾಗಿ ಮುಖ ಉರಿದಹಾಗೆ ಆಗಿ ಹೊಗೆ ಬಂದಿದ್ದರಿಂದ ಗಾಬರಿಯಾಗಿ ತಕ್ಷಣ ಮನೆಗೆ ಹೋಗಿ ಸ್ನೇಹಿತ ಅವಿನಾಶಗೆ ತಿಳಿಸಿದ್ದಾನೆ. ಆತ ಈ ವಿಷಯವನ್ನು ಕಂಪನಿ ಮ್ಯಾನೇಜರ್ ಪಂಕಜ್ ಅವರಿಗೆ ಹೇಳಿದ್ದಾರೆ.
ಪಂಕಜ್ ಅವರು ತಕ್ಷಣ ನಾಗೇಶ್ ಅವರ ಮನೆ ಬಳಿ ಹೋಗಿ ನಾಗೇಶನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಇದು ಸುಟ್ಟಗಾಯ, ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.ವೈದ್ಯರ ಸಲಹೆಯಂತೆ ಪಂಕಜ್ ಅವರು ಆಂಬುಲೆನ್ಸ್ ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.ನಾಗೇಶ ಅವರ ಮುಖದ ಎಡಭಾಗ ಹಾಗೂ ಎಡಗೈಗೆ ಸುಟ್ಟ ಗಾಯಗಳಾಗಿದ್ದು, ಎಡಕಣ್ಣು, ತುಟಿಗಳು ಊದಿಕೊಂಡಿದೆ.
ಈ ಬಗ್ಗೆ ನಾಗೇಶ್ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರುನೀಡಿದ್ದು, ನನ್ನ ಮೇಲೆ ಕೆಮಿಕಲ್ ಎರಚಿದ ಅಪರಿಚಿತ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ, ಆತ ನನಗೆ ಪರಿಚಯವಿಲ್ಲ, ಆತನನ್ನು ಪತ್ತೆಹಚ್ಚಿ ಕಾನೂನು ರೀತಿ ಕ್ರಮಜರುಗಿಸಬೇಕೆಂದು ತಿಳಿಸಿದ್ದಾರೆ.
ಯುವತಿ ವಿಚಾರ:
ಯುವತಿ ವಿಚಾರಕ್ಕೆ ಈ ದಾಳಿ ನಡೆದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಆರೋಪಿ ಪತ್ತೆಗೆ ಶೋಧಕೈಗೊಂಡಿದ್ದಾರೆ.ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಆ್ಯಸಿಡ್ ದಾಳಿ ಇದು ಎರಡನೇ ಪ್ರಕರಣ. 2020ರಲ್ಲಿ ಬೆಳ್ಳಂಬೆಳಗ್ಗೆ ಸುಂಕದಕಟ್ಟೆಯಲ್ಲಿ ಕೆಲಸಕ್ಕೆ ಬರುತ್ತಿದ್ದ ಯುವತಿ ಮೇಲೆ ನಾಗೇಶ ಎಂಬಾತ ಆ್ಯಸಿಡ್ ದಾಳಿ ಮಾಡಿದ್ದ. ಇದೀಗ ಅದೇ ಏರಿಯಾದಲ್ಲಿ ಮತ್ತೆ ಆ್ಯಸಿಡ್ ದಾಳಿ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮಾಡಿಸಿದೆ.