Sunday, October 6, 2024
Homeರಾಜ್ಯಮಹಾಲಕ್ಷ್ಮಿ ಹಂತಕರು ಒಬ್ಬನೋ ಅಥವಾ ಇಬ್ಬರಿದ್ದಾರೋ ಗೊತ್ತಿಲ್ಲ : ಗೃಹಸಚಿವ

ಮಹಾಲಕ್ಷ್ಮಿ ಹಂತಕರು ಒಬ್ಬನೋ ಅಥವಾ ಇಬ್ಬರಿದ್ದಾರೋ ಗೊತ್ತಿಲ್ಲ : ಗೃಹಸಚಿವ

Karnataka Home Minister on Bengaluru woman murder: Have identified suspect

ಬೆಂಗಳೂರು,ಸೆ.23- ವಯ್ಯಾಲಿಕಾವಲ್ ಬಸಪ್ಪಗಾರ್ಡನ್ನ ಮಹಾಲಕ್ಷ್ಮಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಲಾಗಿದ್ದು, ಶೀಘ್ರವೇ ಆರೋಪಿ ಗಳನ್ನು ಬಂಧಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಹಂತದಲ್ಲಿ ಯಾವುದೇ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಹತ್ಯೆಯಲ್ಲಿ ಒಬ್ಬರಿದ್ದಾರೋ, ಇಬ್ಬರಿದ್ದಾರೋ ಗೊತ್ತಿಲ್ಲ. ಆದರೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಿದ್ದೇವೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿಯವರು ರಾಜ್ಯಪಾಲರಿಗೆ ದೂರು ನೀಡುವುದನ್ನು ಬೇಡ ಎನ್ನಲಾಗುವುದಿಲ್ಲ. ಆದರೆ ಅವರು ಮಾಡಿರುವ ಆರೋಪದ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

ಯಾದಗಿರಿ ಪಿಎಸ್ಐ ಪರಶುರಾಮ್ ಅವರ ಕುಟುಂಬಕ್ಕೆ ವಿಮೆ ಆಧರಿಸಿ 25 ಲಕ್ಷ ರೂ.ಗಳ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅವರ ಪತ್ನಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ತಮಗೆ ಬೇರೆ ಇಲಾಖೆಯಲ್ಲಿ ಕೆಲಸ ಕೊಡಿಸುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅದರ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಪ್ರಕರಣ ಮೇಲ್ನೋಟಕ್ಕೆ ಕಂಡುಬಂದಷ್ಟು ಸರಳವಾಗಿಲ್ಲ. ಒಂದು ದೂರು ಬಂದಾಗ ಅದನ್ನು ದಾಖಲಿಸಿ ಮುನಿರತ್ನ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆದರೆ ದಿನನಿತ್ಯ ಅವರ ನಡುವೆ ಒಂದೊಂದು ಪ್ರಕರಣ ಬೆಳಕಿಗೆ ಬರುತ್ತಿದೆ. ಹೀಗಾಗಿ ಹೆಚ್ಚಿನ ತನಿಖೆಗಾಗಿ ಎಸ್ಐಟಿ ರಚನೆ ಮಾಡಿದ್ದೇವೆ, ಶೀಘ್ರವೇ ಎಸ್ಐಟಿ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ದಿನಕ್ಕೊಂದು ಆರೋಪಗಳು ಬೆಳಕಿಗೆ ಬರುವ ಹಿನ್ನೆಲೆಯಲ್ಲಿ ಎಸ್ಐಟಿ ರಚನೆ ಮಾಡುವ ಅನಿವಾರ್ಯತೆ ಇದೆ ಎಂದು ನಮಗೆ ಮನವರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದರು.

ನಾಗಮಂಗಲದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿದ ತಂಡದ ಸದಸ್ಯ ಕಿರಣ್ ಅನಾರೋಗ್ಯದಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾವು ಪ್ರತಿಕ್ರಿಯಿಸುವುದಿಲ್ಲ. ತನಿಖೆ ಪ್ರಗತಿಯಲ್ಲಿದೆ. ಅದರ ವರದಿ ಬಂದ ಬಳಿಕ ಹೇಳಿಕೆ ನೀಡುವುದಾಗಿ ತಿಳಿಸಿದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಎಲ್ಲರಿಗೂ ಒಂದೇ ರೀತಿಯ ಮಾನದಂಡವನ್ನು ಅನುಸರಿಸಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ ಮೇಲೆ ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೂ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ನೋಟಿಸ್ ನೀಡಬೇಕಿತ್ತು. ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಪ್ರಶ್ನಿಸಿದಾಗ ಸ್ಪಷ್ಟನೆ ಕೇಳಿ ಕುಮಾರಸ್ವಾಮಿಯವರ ಕಡತವನ್ನು ಲೋಕಾಯುಕ್ತಕ್ಕೆ ವಾಪಸ್ ಕಳುಹಿಸಿದರು ಎಂದು ಹೇಳಿದರು.

ಮುಖ್ಯಮಂತ್ರಿಯವರಿಗೆ ನೋಟಿಸ್ ನೀಡಿದ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅದನ್ನು ರಾಜ್ಯಪಾಲರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ರಹಸ್ಯ ದಾಖಲೆ ಎಂಬುದು ಸಂಪುಟದಿಂದ ಹೊರಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರು ದಿನನಿತ್ಯ ಸರ್ಕಾರಕ್ಕೆ ಒಂದೊಂದು ವಿಚಾರಕ್ಕೆ ಪತ್ರ ಬರೆಯುತ್ತಿರುವುದು ಸರಿಯಲ್ಲ. ಸಂವಿಧಾನದಲ್ಲಿ ರಾಜ್ಯಪಾಲರ ನಡವಳಿಕೆ ಹಾಗೂ ಪಾತ್ರದ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಅದನ್ನು ಮೀರಿ ವರ್ತಿಸುವುದು ಸಂವಿಧಾನ ಬಾಹಿರವಾಗಲಿದೆ. ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ರಾಜ್ಯಪಾಲರು ಕೇಳಿರುವ ಮಾಹಿತಿಯನ್ನು ಒದಗಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ರಾಜ್ಯಪಾಲರು ನೀಡಿದ ಎಲ್ಲಾ ನೋಟಿಸ್ಗೂ ಉತ್ತರ ನೀಡಬೇಕು ಎಂಬುದೇನಿಲ್ಲ. ಸಂವಿಧಾನದಲ್ಲಿ ರಾಜ್ಯಸರ್ಕಾರಕ್ಕೆ ಕಾರ್ಯ ನಿರ್ವಹಣಾಧಿಕಾರವನ್ನು ನೀಡಲಾಗಿದೆ. ಇದರಲ್ಲಿ ಎರಡು ಮಾತಿಲ್ಲ. ರಾಜ್ಯಪಾಲರು ಈ ರೀತಿ ವರ್ತಿಸುವುದನ್ನು ಎಂದೂ ನೋಡಿರಲಿಲ್ಲ ಎಂದು ಹೇಳಿದರು.

RELATED ARTICLES

Latest News