ಕೊಲೆಗೆ ಸುಪಾರಿ ಕೊಟ್ಟ ನಟಿ ಅಂದರ್

ಚನ್ನಪಟ್ಟಣ,ಏ.28- ರಾಂಪುರ ಗ್ರಾಮದಲ್ಲಿ ರೌಡಿಶೀಟರ್‍ವೊಬ್ಬನನ್ನು ಕಲ್ಲಿನಿಂದ ತಲೆಜಜ್ಜಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧ ನಟಿ ಹಾಗೂ ಆಕೆಯ ತಾಯಿಯನ್ನು ಚನ್ನಪಟ್ಟಣ ಗ್ರಾಮಾಂತ ಠಾಣೆ ಪೊಲೀಸರು ಬಂಧಿಸಿದ್ದಾರೆ.  ನಟಿ ಪ್ರಿಯಾಂಕಾ ಅಲಿಯಾಸ್ ಸವಿತಾ (32) ಹಾಗೂ ಆಕೆಯ ತಾಯಿ ನಾಗಮ್ಮ (55) ಬಂಧಿತ ಆರೋಪಿಗಳು.

ಜ.29ರಂದು ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ಕಲ್ಲಿನಿಂದ ತಲೆಯನ್ನು ಜಜ್ಜಿ ರೌಡಿಶೀಟರ್ ಸುನೀಲ್ ಎಂಬಾತನನ್ನು ಕೊಲೆ ಮಾಡಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಎರಡು ತಿಂಗಳ ಹಿಂದೆ ಪ್ರಕರಣದ ಪ್ರಮುಖ ಆರೋಪಿಗಳಾದ ಮನು ಹಾಗೂ ಶಿವರಾಜು ಎಂಬುವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದ್ದರು.

ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ರೌಡಿಶೀಟರ್ ಸುನೀಲ್ ಕೊಲೆಗೆ ನಟಿ ಪ್ರಿಯಾಂಕ ಸುಪಾರಿ ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಮನು, ಪ್ರಿಯಾಂಕಾಳ ಚಿಕ್ಕಮ್ಮನ ಮಗನಾಗಿದ್ದು, ತನ್ನ ಸಂಬಂಧಿ ಸುನೀಲ್ ತನಗೆ ಕಿರುಕುಳು ನೀಡುತ್ತಿದ್ದಾನೆ ಎಂದು ಹೇಳಿ ಆತನ ಕೊಲೆ ಮಾಡಲು ಸುಪಾರಿ ನೀಡಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ.

ಇದೀಗ ಪೊಲೀಸರು ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ನಟಿ ಹಾಗೂ ಆಕೆಯ ತಾಯಿಯನ್ನು ಬಂಧಿಸಿದ್ದಾರೆ.
ನಟಿ ಪ್ರಿಯಾಂಕ ಐಪಿಸಿ ಸೆಕ್ಷನ್ 300 , ಯಜ್ಞ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಸೇರಿದಂತೆ ಕನ್ನಡ ಹಾಗೂ ತೆಲುಗಿನ ಚಿತ್ರಗಳಲ್ಲಿ ಪ್ರಿಯಾಂಕಾ ನಟಿಸಿದ್ದಾಳೆ.