Thursday, September 19, 2024
Homeಅಂತಾರಾಷ್ಟ್ರೀಯ | Internationalಅಮರಿಕದಲ್ಲಿ ಕನ್ನಡ ಡಿಂಡಿಮ : ವರ್ಜೀನಿಯಾದಲ್ಲಿ ಅಕ್ಕ ಸಮ್ಮೆಳನ ಸಂಭ್ರಮ : Full Details

ಅಮರಿಕದಲ್ಲಿ ಕನ್ನಡ ಡಿಂಡಿಮ : ವರ್ಜೀನಿಯಾದಲ್ಲಿ ಅಕ್ಕ ಸಮ್ಮೆಳನ ಸಂಭ್ರಮ : Full Details

Akka Sammelana celebration in Virginia

ವಾಷಿಂಗ್ಟನ್‌,ಸೆ.1– ವರ್ಜೀನಿಯಾ ರಾಜ್ಯದ ರಿಚಂಡ್‌ನಗರದಲ್ಲಿ ನಡೆಯುತ್ತಿರುವಅಕ್ಕ ವಿಶ್ವ ಕನ್ನಡ ಸಮ್ಮೆಳನದಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಎಲ್ಲೆಲ್ಲೂ ಕನ್ನಡಮಯ ವಾತಾವರಣ ಕಂಡು ಬಂದು ವಿದೇಶದಲ್ಲೂ ಹೊಸ ಹುರುಪು ಮೂಡಿಸಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಕೃಷಿ ಸಚಿವ ಚಲುವನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಮಹೇಶ್‌ ಜೋಷಿ, ಅಕ್ಕ ಅಧ್ಯಕ್ಷ ರವಿ ಬೋರೇಗೌಡ, ಸಂಸ್ಥಾಪಕ ಅಧ್ಯಕ್ಷ ಅಮರನಾಥ್‌ಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಕನ್ನಡದ ಕಂಪನ್ನು ಹರಿಸಿರುವ ಅಮೇರಿಕದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು, ಉದ್ಯಮಿಗಳು ಕೂಡ ಜೊತೆಯಾಗಿ ಸಂಭ್ರಮದಿಂದ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನ ನಡೆದ ಭವ್ಯ ಮೆರವಣಿಗೆಯಲ್ಲಿ ಕನ್ನಡ ಸಂಸ್ಕೃತಿಯನ್ನು ಅನಾವರಣಗೊಳಿಸಲಾಗಿತ್ತು. ಸಾರೋಟ್‌ನಲ್ಲಿ ಭುವನೇಶ್ವರಿ ದೇವಿಯ ಮೆರವಣಿಗೆ ಎಲ್ಲರ ಗಮನ ಸೆಳೆದರೆ ಇನ್ನು ಮಹಿಳೆಯರು ಸಾಂಪ್ರದಾಯಿಕ ಸೀರೆ ಉಟ್ಟು, ತಲೆ ಮೇಲೆ ಕಳಸ ಹೊತ್ತು ಹೊಸ ಮೆರಗು ನೀಡಿದರು.ಕನ್ನಡಾಂಬೆಯ ಜಯಘೋಷಗಳು, ಹಲವು ಜ್ಞಾಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಚಿತ್ರಗಳನ್ನು ಹಿಡಿದು ಮಕ್ಕಳು ಕನ್ನಡ ಪ್ರೇಮವನ್ನು ಪ್ರದರ್ಶಿಸಿದರು. ಇದೇ ವೇಳೆ ಸಾಂಸ್ಕೃತಿಕ ಕಲಾ ತಂಡಗಳು ಕೂಡ ಆಕರ್ಷಿಸಿತು. ಸುಮಾರು 1 ಕಿ.ಮೀ ನಡೆದ ಈ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ನಮ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದರು.

ಕನ್ನಡವೆಂಬ ಭಾವ ಸೇತು ವಿಶ್ವದೆಲ್ಲೆಡೆ ಬೆಸೆದಿದೆ : ಎನ್‌ ಚಲುವರಾಯಸ್ವಾಮಿ
ಕನ್ನಡ ಎಂದರೆ ಕೇವಲ ಭಾಷೆಯಲ್ಲ, ಅದೊಂದು ಭಾವ ಸೇತುವಾಗಿದ್ದು, ವಿಶ್ವದೆಲ್ಲೆಡೆ ಮನಸ್ಸು, ಸಂಸ್ಕೃತಿಗಳನ್ನು ಬೆಸೆಯುತ್ತಾ ಬೆಳೆಯುತ್ತಿರುವುದು ಹೆಮೆಯ ವಿಚಾರ ಎಂದು ಕರ್ನಾಟಕ ರಾಜ್ಯದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಅಮೇರಿಕಾದ ವರ್ಜೀನಿಯಾ ರಾಜ್ಯದ ರಿಚಂಡ್‌ನಲ್ಲಿ ನಡೆಯುತ್ತಿರುವ ಅಕ್ಕಾ (ಅಮೆರಿಕಾ ಕನ್ನಡ ಸಂಘಟನೆಗಳ ಒಕ್ಕೂಟ) ಸಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲೇ ಕನ್ನಡದ ಕಾರ್ಯಕ್ರಮಗಳ ಸಂಘಟನೆ ಕಷ್ಟಪಡಬೇಕಾದ ಸಂದರ್ಭದಲ್ಲಿ ಅಮೇರಿಕಾದಲ್ಲಿನ ಕನ್ನಡದ ಮನಸ್ಸುಗಳು 1998 ರಲ್ಲೇ ಒಟ್ಟಾಗಿ ಇಷ್ಟೊಂದು ಸಂಘಟಿತರಾಗಿ, ನಿರಂತರವಾಗಿ ನುಡಿ ಹಬ್ಬ ಆಚರಿಸುತ್ತಾ ಬಂದಿರುವುದು ಅಭಿಮಾನದ ಸಂಗತಿ ಎಂದರು.

ಉದ್ಯೋಗ ಅರಸಿ ಬಂದು ಇಲ್ಲಿಯೂ ತವರಿನ ಭಾಷೆ, ಸಂಸ್ಕೃತಿಯ ಬಗ್ಗೆ ಕಾಳಜಿ ಹೊಂದಿರುವುದು ಅಭಿನಂದನೀಯ. ವಿಶ್ವದೆಲ್ಲೆಡೆ ಇದೇ ರೀತಿ ಕನ್ನಡದ ಕಂಪು ಪಸರಿಸಲಿ ಎಂದು ಅವರು ಹಾರೈಸಿದರು.

ಅಮೆರಿಕದಲ್ಲಿನ ಕನ್ನಡದ ಮನಸ್ಸುಗಳು ಕರುನಾಡಿನ ಭಾಷೆ, ಸಂಸ್ಕೃತಿಯ ವೃದ್ಧಿಗೆ ಕೈ ಜೋಡಿಸಿರುವಂತೆ ನಮ ಕೃಷಿ ತಂತ್ರಜ್ಞಾನದ ಅಭಿವೃದ್ಧಿಗೂ ನೆರವಾಗಬೇಕು ಎಂದು ಚಲುವರಾಯಸ್ವಾಮಿ ಮನವಿ ಮಾಡಿದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಸಾಹಿತ್ಯಕವಾಗಿಯೂ ಶ್ರೀಮಂತವಾಗಿದೆ. 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.

ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುತ್ತಾ ಕನ್ನಡದ ದೀಪವನ್ನು ಮನೆ ಮನೆಗಳಲ್ಲಿ ಬೆಳಗೋಣ ಎಂದು ಕರೆ ನೀಡಿದ ಸಚಿವರು, ರಾಜ್ಯ ಸರ್ಕಾರ ಸಂಘಟನೆ ಹಾಗೂ ಸಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ವಚನಾನಂದ ಸ್ವಾಮೀಜಿ, ಶಾಸಕರಾದ ಎಸ್‌‍.ಟಿ. ಸೋಮಶೇಖರ್‌, ತಮ್ಮಯ್ಯ, ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌, ಮಾಜಿ ಸಚಿವರಾದ ಹೆಚ್‌.ಆಂಜನೇಯ, ರಾಣಿ ಸತೀಶ್‌, ವರ್ಜೀನಿಯಾ ಸೆನೆಟರ್‌ ಕೆನ್‌, ಅಕ್ಕ ಸಂಸ್ಥೆಯ ಅಧ್ಯಕ್ಷ ರವಿ ಬೋರೇಗೌಡ, ಅಕ್ಕ ಸಂಸ್ಥಾಪಕ ಅಧ್ಯಕ್ಷ ಡಾ.ಅಮರನಾಥಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್‌ ಜೋಶಿ ಮತ್ತಿತರರು ಹಾಜರಿದ್ದರು.

ಅನ್ನದ ಭಾಷೆಯನ್ನಾಗಿ ಕನ್ನಡ : ಗಂಭೀರ ಚಿಂತನೆ ಅಗತ್ಯ – ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ
ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಪರಿವರ್ತಿಸಿ ಉದ್ಯೋಗ ಹಾಗೂ ಇತರ ಕಾರಣಗಳಿಗೆ ಕನ್ನಡ ಭಾಷೆಯನ್ನೇ ಪ್ರಧಾನವನ್ನಾಗಿಸುವ ಸವಾಲು ನಮ ಮುಂದಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲರೂ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಕರೆ ನೀಡಿದ್ದಾರೆ.

ಅಮೆರಿಕಾದ ವರ್ಜೀನಿಯಾ ರಾಜ್ಯದ ರಾಜಧಾನಿಯಾಗಿರುವ ರಿಚಂಡ್‌ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 12 ನೇ ಅಕ್ಕ ವಿಶ್ವ ಕನ್ನಡ ಸಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ವ್ಯಾವಹಾರಿಕವಾಗಿ ಕನ್ನಡ ಬಳಸುವುದನ್ನು ಕಡಿಮೆ ಮಾಡುತ್ತಿದ್ದು, ಉದ್ಯೋಗ ಹಾಗೂ ಇತರ ಕಾರಣಗಳಿಗಾಗಿ ಬಹುತೇಕ ಜನರು ಆಂಗ್ಲ ಭಾಷೆಯನ್ನೇ ಬಳಸುತ್ತಿದ್ದಾರೆ. ಹೀಗಾಗಿ ಕನ್ನಡ ಭಾಷೆಯಲ್ಲಿಯೇ ಕಲಿತರೂ ಸೂಕ್ತ ಉದ್ಯೋಗ ದೊರೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದರು.

ಪ್ರಪಂಚದಲ್ಲಿ ಅದೆಷ್ಟೋ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅಂತೆಯೇ ಕನ್ನಡವೂ ಸಹ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿದೆ ಎನ್ನುವ ಹೇಳಿಕೆಗಳನ್ನು ಅಲ್ಲಗಳೆಯಲಾರದ ಸ್ಥಿತಿ ಇಂದು ನಿರ್ಮಾಣವಾಗಿದೆ. ಇಂದಿನ ಜಾಗತಿಕ ಪೈಪೋಟಿಯ ಭರಾಟೆಯಲ್ಲಿ ನಮ ಮಾತೃ ಭಾಷೆಯನ್ನು ಮರೆತು ಅನ್ಯ ಭಾಷೆಗೆ ಜೋತು ಬೀಳುವ ವಾತಾವರಣ ಇಂದು ಎಲ್ಲೆಡೆ ಕಾಣಸಿಗುತ್ತಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ, ಕನ್ನಡಿಗ ಹಾಗೂ ಕರ್ನಾಟಕತ್ವದ ಅಸ್ತಿತ್ವಕ್ಕಾಗಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್‌, ಡೆಪ್ಯೂಟಿ ಚನ್ನಬಸಪ್ಪ ಮತ್ತಿತರ ಮಹಾನ್‌ ಪುರುಷರು ಕನ್ನಡ ಪ್ರಜ್ಞೆಯನ್ನು ಉಳಿಸಿ, ಬೆಳೆಸಿ ಕನ್ನಡದ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಿ ಚೆಲುವ ಕನ್ನಡ ನಾಡನ್ನು ಕಟ್ಟಲು ಶ್ರಮಿಸಿದ ಇತಿಹಾಸವನ್ನು ನಾವೆಲ್ಲರೂ ಅರಿಯಬೇಕಿದೆ.

ಕನ್ನಡದ ರಕ್ಷಣೆ ಕೇವಲ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಹಳ್ಳಿಗರಿಂದ ಎಂಬ ಮಾತು ಇಂದು ಸತ್ಯವಾಗುತ್ತಿದ್ದು, ಪ್ರತಿಷ್ಠಿತ ಶಾಲಾ, ಕಾಲೇಜುಗಳಲ್ಲಿ ಓದಿದ ಹಾಗೂ ಓದುತ್ತಿರುವವರಿಂದ ಕನ್ನಡದ ಬಗೆಗಿನ ಅಸಡ್ಡೆ ಕಂಡು ಬರುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಹೊರಟ್ಟಿ ನುಡಿದರು.

ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು, ಭಾಷೆ ಉಳಿಯಬೇಕೆಂದರೆ ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ನಮ ಆದ್ಯತೆಯ ಭಾಷೆ ಮೊದಲು ಕನ್ನಡವಾಗಿ ಅನಂತರ ಇತರ ಭಾಷೆಗಳಾಗಿರಬೇಕು.

ಕನ್ನಡದಲ್ಲಿ ಲಭ್ಯವಿಲ್ಲದ್ದನ್ನು ಲಭ್ಯ ಮಾಡಿಕೊಂಡು ಅದನ್ನು ಎಲ್ಲರಿಗೂ ತಲುಪಿಸುವ ಮೂಲಕ ನಮ್ಮ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಬೇರೆ ಭಾಷೆಗಳನ್ನು ಗೌರವಿಸಬೇಕು, ಕಲಿಯಬೇಕು, ಆದರೆ ನಮ ಕನ್ನಡವನ್ನು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಆಡಳಿತಾತಕವಾಗಿ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕಿದೆ ಎಂದರು.

ಕನ್ನಡ ತಾಯಿ ಕರ್ನಾಟಕದಲ್ಲಿ ಕಳೆದು ಹೋಗದಂತೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಿ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಗಳ ಉಳಿವಿಗಾಗಿ ಶ್ರಮಿಸಬೇಕು, ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸಹ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದೆ, ಇದರ ಕಟ್ಟುನಿಟ್ಟಿನ ಪಾಲನೆಯಾಗುವತ್ತ ಕರ್ನಾಟಕ ಸರ್ಕಾರ ಹಾಗೂ ಅಧಿಕಾರಿಗಳು ಸಹ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಅವರು ನುಡಿದರು.

ಜಗತ್ತಿನೆಲ್ಲೆಡೆ ಇರುವ ಕನ್ನಡಿಗರು ಎಂದೆಂದಿಗೂ ಕನ್ನಡಿಗರಾಗಿ ಉಳಿದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸಂಕಲ್ಪದ ಭಾಗವಾಗಿ ಇಂದಿನ ಅಕ್ಕ ಕನ್ನಡ ಸಮ್ಮೇಳನ ಅಮೇರಿಕಾದಲ್ಲಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಸವರಾಜ ಹೊರಟ್ಟಿ ಸಂತಸ ವ್ಯಕ್ತಪಡಿಸಿದರು.

RELATED ARTICLES

Latest News