Sunday, September 15, 2024
Homeಅಂತಾರಾಷ್ಟ್ರೀಯ | Internationalಬಾಂಗ್ಲಾದೇಶದಲ್ಲಿ ಸಿಡಿದೆದ್ದ ಹಿಂದೂಗಳು, ಬೃಹತ್ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಸಿಡಿದೆದ್ದ ಹಿಂದೂಗಳು, ಬೃಹತ್ ಪ್ರತಿಭಟನೆ

ಢಾಕಾ,ಅ.11- ಶೇಖ್ ಹಸೀನಾ ಅವರ ಪದಚ್ಯುತಿ ನಂತರವೂ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರೆದಿರುವುದನ್ನು ಖಂಡಿಸಿ ಅಲ್ಲಿನ ಲಕ್ಷಾಂತರ ಹಿಂದೂಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ದೇಶದ ಎರಡನೇ ಅತಿದೊಡ್ಡ ನಗರವಾದ ಚಿತ್ತಗಾಂಗ್ಗಳಲ್ಲಿ ನಡೆದ ಹಿಂದೂಗಳ ಬೃಹತ್ ಪ್ರತಿಭಟನೆಯಲ್ಲಿ ಲಕ್ಷಾಂತರ ಹಿಂದೂಗಳು ಪಾಲ್ಗೊಂಡಿದ್ದರು.

ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಆ.5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನದ ನಂತರ 52 ಜಿಲ್ಲೆಗಳಲ್ಲಿ 205ಕ್ಕೂ ಹೆಚ್ಚು ದಾಳಿಯ ಘಟನೆಗಳನ್ನು ಎದುರಿಸಿದ್ದಾರೆ. ನೂರಾರು ಹಿಂದೂಗಳು ತಮ್ಮ ಮನೆಗಳು ಮತ್ತು ವ್ಯವಹಾರಗಳ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಹಲವಾರು ಹಿಂದೂ ದೇವಾಲಯಗಳನ್ನು ಸಹ ಧ್ವಂಸಗೊಳಿಸಲಾಗಿದೆ ಮತ್ತು ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಇಬ್ಬರು ಹಿಂದೂ ನಾಯಕರು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸಾವಿರಾರು ಬಾಂಗ್ಲಾದೇಶಿ ಹಿಂದೂಗಳು ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವವರ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಮಂಡಳಿಗಳ ರಚನೆ, ಅಲ್ಪಸಂಖ್ಯಾತರಿಗೆ ಶೇ. 10ರಷ್ಟು ಸಂಸದೀಯ ಸ್ಥಾನಗಳ ಹಂಚಿಕೆ ಮತ್ತು ಇತರರೊಂದಿಗೆ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಾನೂನು ಜಾರಿಗೆ ಒತ್ತಾಯಿಸಿ ಹಿಂದೂ ಪ್ರತಿಭಟನಾಕಾರರ ರ್ಯಾಲಿಯು ಕೇಂದ್ರದ ಶಾಹಬಾಗ್ನಲ್ಲಿ 3 ಗಂಟೆಗಳ ಕಾಲ ಸಂಚಾರವನ್ನು ನಿರ್ಬಂಧಿಸಿತ್ತು.

ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮುಸ್ಲಿಂ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಪರವಾಗಿ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಚಿತ್ತಗಾಂಗ್ನಲ್ಲಿ ಐತಿಹಾಸಿಕ ಚೆರಗಿ ಪಹಾರ್ ಚೌಕದಲ್ಲಿ ಬೃಹತ್ ಸಮಾವೇಶ ನಡೆಯಿತು. ಕೆಲವು ವರದಿಗಳ ಪ್ರಕಾರ, 7 ಲಕ್ಷಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಬಾಂಗ್ಲಾದೇಶದ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ಶನಿವಾರ ಹಿಂಸಾಚಾರ ಪೀಡಿತ ರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಈ ಕೃತ್ಯವನ್ನು ಹೇಯ ಕೃತ್ಯ ಎಂದು ಟೀಕಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರಾದ ಮುಹಮ್ಮದ್ ಯೂನಸ್ ಅವರು ಪ್ರತಿಭಟನೆಯ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳನ್ನು, ಎಲ್ಲಾ ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧ ಕುಟುಂಬಗಳನ್ನು ಹಾನಿಯಿಂದ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News