ಬೆಂಗಳೂರು,ಏ.1- ಬಿಜೆಪಿ ಚುನಾವಣಾ ಚಾಣುಕ್ಯ ಎಂದೇ ಕರೆಯುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರಸಕ್ತ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಭಾಗಿಯಾಗುತ್ತಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ರ್ಪಧಿ ಗಿಳಿಯುತ್ತಿವೆ. ಎನ್ಡಿಎ ಅಭ್ಯರ್ಥಿಗಳ ಪರ ಷಾ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ನಾಳೆ ಸಂಜೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಪರವಾಗಿ ರೋಡ್ ಶೋನಲ್ಲಿ ಪಾಲ್ಗೊಂಡು ಮತ ಯಾಚನೆ ಮಾಡಲಿದ್ದಾರೆ.
ಬೆಂಗಳೂರು ಹಾಗೂ ಚನ್ನಪಟ್ಟಣದಲ್ಲಿ ತಲಾ ಒಂದು ಕಾರ್ಯಕ್ರಮ ನಿಗದಿಯಾಗಿವೆ. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಷಾ ಇಂದು ತಡರಾತ್ರಿ ನಗರಕ್ಕೆ ಆಗಮಿಸಲಿದ್ದಾರೆ.
ಇಂದು ರಾತ್ರಿ ನಗರಕ್ಕೆ ಆಗಮಿಸಲಿರುವ ಷಾ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದು, ನಾಳೆ ಮಧ್ಯಾಹ್ನ ಅರಮನೆ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಶಕ್ತಿಕೇಂದ್ರ ಪ್ರಮುಖ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಚನ್ನಪಟ್ಟಣಕ್ಕೆ ತೆರಳಲಿದ್ದಾರೆ.
ನಾಳೆ ಸಂಜೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಚನ್ನಪಟ್ಟಣದ ಚಿಕ್ಕಮಗಳೂರಿನಿಂದ ಡಿ.ಟಿ.ರಾಮು ವೃತ್ತದವರೆಗೂ ನಡೆಯುವ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಜುನಾಥ್ ಸೇರಿದಂತೆ ಬಿಜೆಪಿ-ಜೆಡಿಎಸ್ ನಾಯಕರು ಷಾ ಅವರೊಂದಿಗೆ ರೋಡ್ ಶೋನಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ.