ಹಾಸನ, ಮಾ.13- ಚಾಲಕನ ನಿಯಂತ್ರಣ ತಪ್ಪಿದ ಅನಿಲ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ನ ಡಬಲ್ ಡರ್ನ್ ಬಳಿ ಇಂದು ಬೆಳಗ್ಗೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಎಲ್ಪಿಜಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗುತ್ತಿದ್ದು, ಅಗ್ನಿ ಅನಾಹುತ ತಪ್ಪಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ತಗುಲುವುದನ್ನು ತಪ್ಪಿಸಿದ್ದಾರೆ. ಬೆಂಗಳೂರು-ಹಾಸನ, ಮಂಗಳೂರು-ಹಾಸನ-ಧರ್ಮಸ್ಥಳ ಮಾರ್ಗವಾಗಿ ತೆರಳುವ ವಾಹನಗಳಿಗೆ ಆನುಬಾಳು ಮೂಲಕ ಮೂಡಿಗೆರೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ.
ಮಂಗಳೂರಿನಿಂದ ಹಾಸನ-ಬೆಂಗಳೂರಿಗೆ ತೆರಳುವವರು ಕೂಡ ಗುಂಡ್ಯಾ ಚೆಕ್ ಪೋಸ್ಟ್ ಬಳಿ ಬದಲಿ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ. ಪಲ್ಟಿಯಾದ ಗ್ಯಾಸ್ ಟ್ಯಾಂಕರ್ನಿಂದ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗುತ್ತಿದ್ದು, ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಒಂದು ವೇಳೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ಮುಗಿಯುವವರೆಗೂ ಈ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.