ಬೆಂಗಳೂರು,ಏ.11- ಜನ ಸಾಮಾನ್ಯರ ಶಕ್ತಿ ಎಂಬ ಟ್ಯಾಗ್ ಲೈನ್ ಹೊಂದಿರುವ ಫ್ರೀಡಂ ಟಿವಿ ಲೋಕಾರ್ಪಣೆಗೊಂಡಿದೆ. ಪತ್ರಕರ್ತ ಎಲ್ .ಎಂ.ನಾಗರಾಜು ಅವರ ಸಾರಥ್ಯದಲ್ಲಿ ಆರಂಭವಾಗಿರುವ ಫ್ರೀಡಂ ಟಿವಿ ಸದಾಶಿವನಗರದ ಭಾಷ್ಯಂ ಸರ್ಕಲ್ ನಲ್ಲಿ ಆರಂಭಗೊಂಡಿದೆ. ಇಂತಹ ಟಿವಿಯನ್ನು ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಹಾಗೂ ರೈತರ ಪ್ರತಿನಿಧಿಗಳ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಪಾಲ್ಗೊಂಡು ಜ್ಯೋತಿ ಬೆಳಗಿಸಿದರು. ಹಿರಿಯ ನಟಿ ಪ್ರೇಮಾ ಫ್ರೀಡಂ ಟಿವಿಯ ಸ್ಟುಡಿಯೋ ಉದ್ಘಾಟಿಸಿದರು. ಲಹರಿ ಸಂಸ್ಥೆಯ ಸಂಸ್ಥಾಪಕ ಲಹರಿ ವೇಲು ಅವರು ಪ್ರೊಡಕ್ಷನ್ ಕಂಟ್ರೋಲ್ ರೂಂ ಉದ್ಘಾಟಿಸಿದರು.
ಫ್ರೀಡಂ ಟಿವಿಯ ಸಂಸ್ಥಾಪಕರು, ಮ್ಯಾನೇಜಿಂಗ್ ಡೈರೆಕ್ಟರ್ ಆದ ಎಲ್ .ಎಂ.ನಾಗರಾಜ್ ಮಾತನಾಡಿ, ವಾಹಿನಿಯು ಜನಸಾಮಾನ್ಯರ ಪ್ರತಿನಿಧಿಯಂತೆ ಕೆಲಸ ಮಾಡಲಿದೆ. ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಪತ್ರಿಕಾರಂಗದ ಘನತೆ ಹೆಚ್ಚಿಸಲು ಶ್ರಮಿಸಲಿದೆ ಎಂದರು.
ಫ್ರೀಡಂ ಸುದ್ದಿವಾಹಿನಿಯು ದೈನಂದಿನ ಸುದ್ದಿಗಳ ಜೊತೆ ಜೊತೆಯಲ್ಲೇ ಧಾರ್ಮಿಕ, ಆಧ್ಯಾತ್ಮ, ಮನರಂಜನೆ, ಕ್ರೀಡೆ, ಹೀಗೆ ಪ್ರತಿಕ್ಷೇತ್ರದ ಆಗುಹೋಗುಗಳ ಬಗ್ಗೆ ಮಾಹಿತಿ ನೀಡಲಿದೆ. ಎಲ್ಲಾ ಕೇಬಲ್ ನೆಟ್ ವರ್ಕ್‍ಗಳ ಜೊತೆ ಯೂಟ್ಯೂಬ್ , -ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳ ಮೂಲಕವೂ ಫ್ರೀಡಂ ಟಿವಿ ನಿಮ್ಮ ಮನೆ ಮನೆಗೆ ಬರಲಿದೆ ಎಂದು ಅವರು ತಿಳಿಸಿದರು.