Friday, May 17, 2024
Homeರಾಜ್ಯವಿಧಾನಸಭೆ ಪ್ರತಿಪಕ್ಷದ ಉಪನಾಯಕನ ಸ್ಥಾನಕ್ಕೆ ಅರವಿಂದ್ ಬೆಲ್ಲದ್..?

ವಿಧಾನಸಭೆ ಪ್ರತಿಪಕ್ಷದ ಉಪನಾಯಕನ ಸ್ಥಾನಕ್ಕೆ ಅರವಿಂದ್ ಬೆಲ್ಲದ್..?

ಬೆಳಗಾವಿ,ಡಿ.6- ವಿಧಾನಸಭೆಯ ಪ್ರತಿಪಕ್ಷದ ಉಪನಾಯಕರಾಗಿ ಅರವಿಂದ್ ಬೆಲ್ಲದ್ ಅವರನ್ನು ಬಿಜೆಪಿ ನೇಮಕ ಮಾಡಲು ಮುಂದಾಗಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ಮುಂದಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಅಸಮಾಧಾನವನ್ನು ಸರಿದೂಗಿಸುವುದು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಆರೋಪ ಹಾಗೂ ಪಕ್ಷದ ವಿರುದ್ಧವೇ ಗುಟುರು ಹಾಕುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಯಿಗೆ ಬೀಗ ಹಾಕುವುದು ಇದರ ಹಿಂದಿನ ಉದ್ದೇಶವಾಗಿದೆ.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಗೆದ್ದಿರುವ ಅರವಿಂದ್ ಬೆಲ್ಲದ್ ಅವರನ್ನು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕನ ಸ್ಥಾನಕ್ಕೆ ನೇಮಕ ಮಾಡಲು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೇಂದ್ರದ ವರಿಷ್ಠರಿಗೆ ಮಾಹಿತಿಯನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಬಿಜೆಪಿ ಘಟಕ ಸಮ್ಮತಿ ಸೂಚಿಸಿದ್ದು, ಅರವಿಂದ್ ಬೆಲ್ಲದ್ ಹೆಸರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅರವಿಂದ್ ಬೆಲ್ಲದ್ ಇತ್ತೀಚೆಗೆ ಶಾಸಕಾಂಗ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ವೇಳೆ ಬೆಲ್ಲದ್ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯೂ ಕೂಡ ಆಗಿದ್ದರು. ಇದೀಗ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವು ಮಧ್ಯ ಕರ್ನಾಟಕ ಹಾಗೂ ಪ್ರತಿ ಪಕ್ಷದ ನಾಯಕನ ಸ್ಥಾನ ಬೆಂಗಳೂರಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಭದ್ರಕೋಟೆ ಎನ್ನಿಸಿದ್ದ ಉತ್ತರಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಮುಸ್ಲಿಮರಿಗೆ 10,000 ಕೋಟಿ ಕೊಡುವುದಾಗಿ ಸಿಎಂ ಹೇಳಿಕೆ, ಸದನ ಕೋಲಾಹಲ

ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಬೆಲ್ಲದ್ ಹೆಸರಿಗೆ ಬಹುತೇಕ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ. ಜೊತೆಗೆ ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಆಗಾಗ್ಗೆ ಆರೋಪ ಮಾಡುತ್ತಲೇ ಇದ್ದರು. ಈ ಬೆಳವಣಿಗೆಗಳ ನಡುವೆಯೇ ಪ್ರತಿಪಕ್ಷದ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯತ್ನಾಳ್ಗೆ ಆ ಸ್ಥಾನ ಕೈತಪ್ಪಿದ್ದರಿಂದ ಮತ್ತೆ ತಮ್ಮ ಹಳೆ ಛಾಳಿಯನ್ನು ಮುಂದುವರೆಸಿದ್ದರು.

ಇದೆಲ್ಲವನ್ನು ಪರಿಗಣಿಸಿರುವ ವರಿಷ್ಠರು ಅರವಿಂದ್ ಬೆಲ್ಲದ್ಗೆ ಉಪನಾಯಕನ ಸ್ಥಾನವನ್ನು ನೀಡುವ ಮೂಲಕ ಯತ್ನಾಳ್ ಬಾಯಿ ಬಂದ್ ಮಾಡುವ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ. ಇನ್ನು ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕರ ಸ್ಥಾನಕ್ಕೆ ಶಾಸಕರಾದ ಸತೀಶ್ ರೆಡ್ಡಿ, ಹರೀಶ್ ಪೂಂಜಾ, ಅಭಯ್ ಪಾಟೀಲ್ ಹೆಸರುಗಳನ್ನು ದೆಹಲಿ ನಾಯಕರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES

Latest News