Thursday, May 2, 2024
Homeರಾಜ್ಯಒಲಿಂಪಿಕ್ ಕ್ರೀಡೆಗೆ ರಾಜ್ಯದ ಕ್ರೀಡಾಪಟುಗಳಿಗೆ ಉನ್ನತಮಟ್ಟದ ತರಬೇತಿ

ಒಲಿಂಪಿಕ್ ಕ್ರೀಡೆಗೆ ರಾಜ್ಯದ ಕ್ರೀಡಾಪಟುಗಳಿಗೆ ಉನ್ನತಮಟ್ಟದ ತರಬೇತಿ

ಬೆಳಗಾವಿ, ಡಿ.6- ಮುಂಬರುವ 2024 ರ ಒಲಿಂಪಿಕ್ ಕ್ರೀಡೆಗೆ ರಾಜ್ಯದಿಂದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ತಲಾ 10 ಲಕ್ಷ ರೂ. ವೆಚ್ಚದಲ್ಲಿ ತರಬೇತಿ ಕೊಡಿಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಶ್ನೆ ಕೇಳುತ್ತಾ, ಬೆಂಗಳೂರು ಹಾಗೂ ಇತರ ನಗರ ಪ್ರದೇಶಗಳ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ಸರ್ಕಾರದ ಗಮನ ಸೆಳೆದರು.

ಇದಕ್ಕೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ ಅಮೃತ ಕ್ರೀಡಾ ದತ್ತಿ ಯೋಜನೆಯಡಿ 75 ಮಂದಿಯನ್ನು ಆಯ್ಕೆ ಮಾಡಿಕೊಂಡು ತರಬೇತಿ ಕೊಡಿಸಲಾಗುತ್ತಿದೆ. ಜೊತೆಗೆ ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ ಸೇರಿದಂತೆ ಹಲವು ಸೌಲಭ್ಯಗಳ ಮೂಲಕ ಕ್ರೀಡೆಗೆ ಬೆಂಬಲ ನೀಡಲಾಗುತ್ತಿದೆ ಎಂದರು.

ಮುಸ್ಲಿಮರಿಗೆ 10,000 ಕೋಟಿ ಕೊಡುವುದಾಗಿ ಸಿಎಂ ಹೇಳಿಕೆ, ಸದನ ಕೋಲಾಹಲ

2024 ರ ಒಲಂಪಿಕ್ ಕ್ರೀಡೆಗೆ ಸಜ್ಜುಗೊಳ್ಳುವ ಕ್ರೀಡಾಪಟುಗಳಿಗೆ ಆಹಾರದಿಂದ ಹಿಡಿದು ಎಲ್ಲಾ ರೀತಿಯ ಕಾಳಜಿಯನ್ನು ವಹಿಸಲಾಗುತ್ತಿದೆ. ಪ್ರತಿಯೊಬ್ಬರ ತರಬೇತಿಗೆ 10 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.180 ದೈಹಿಕ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ತರಬೇತಿ ನಡೆಯುತ್ತಿದೆ. ಶೀಘ್ರವೇ ಅವರು ಸೇವೆಗೆ ಸಮರ್ಪಣೆಗೊಳ್ಳಲಿದ್ದಾರೆ. ಈ ಮೂಲಕ ತರಬೇತುದಾರರ ಕೊರತೆಯೂ ನೀಗಲಿದೆ ಎಂದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಂದ್ರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅೀನದಲ್ಲಿ ರಾಜ್ಯಾದ್ಯಂತ 125 ಕ್ರೀಡಾಂಗಣಗಳಿವೆ. ಕ್ರೀಡಾಂಗಣಗಳ ಅಭಿವೃದ್ಧಿಗೆ 5,622 ಲಕ್ಷ ರೂಪಾಯಿಗಳನ್ನು 2 ವರ್ಷಗಳಿಂದ ಬಿಡುಗಡೆ ಮಾಡಲಾಗಿದೆ.

ಹಣಕಾಸು ಲಭ್ಯತೆಯನ್ನು ಆಧರಿಸಿ 16 ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕ್ರೀಡಾಂಗಣಗಳ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಶ್ರವಣಬೆಳಗೊಳದ ಕ್ಷೇತ್ರಗಳಿಗೂ ಆದ್ಯತೆ ಮೇರೆಗೆ ಕ್ರೀಡಾಂಗಣ ಪುನರ್ ಅಭಿವೃದ್ಧಿಗೊಳಿಸುವುದಾಗಿ ಕರೆ ನೀಡಿದರು. ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತರಿಗೆ 25 ಲಕ್ಷ, ಬೆಳ್ಳಿ ಪದಕ ಗೆದ್ದವರಿಗೆ 15 ಲಕ್ಷ ರೂ.ಗಳ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

RELATED ARTICLES

Latest News