ನವದೆಹಲಿ ಮೇ 28- ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ತಮಗೆ ಗಂಭೀರ ಸ್ವರೂಪದ ಕಾಯಿಲೆ ಇದ್ದು, ಪಿಇಟಿ ಹಾಗೂ ಸಿಟಿ ಸ್ಕ್ಯಾನ್ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ 7 ದಿನಗಳ ಕಾಲ ಜಾಮೀನು ವಿಸ್ತರಿಸುವಂತೆ ಕೇಳಿದ್ದರು. ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಲೋಕಸಭಾ ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತದ ಮತದಾನದ ಒಂದು ದಿನದ ನಂತರ ಜೂನ್ 2 ರಂದು ದೆಹಲಿ ಸಿಎಂ ತಿಹಾರ್ ಜೈಲಿನಲ್ಲಿ ಶರಣಾಗಬೇಕಾಗುತ್ತದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳು ಅರ್ಜಿಯ ಪಟ್ಟಿಯನ್ನು ಸಿದ್ದಪಡಿಸಿದರೆ ಅದು ಸೂಕ್ತ ಎಂದು ರಜಾಕಾಲದ ಪೀಠ ಹೇಳಿದೆ.ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ರಜಾಕಾಲದ ಪೀಠವು ದೆಹಲಿ ಮುಖ್ಯಮಂತ್ರಿ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿ್ವಂ ಅವರ ಸಲ್ಲಿಕೆಗಳನ್ನು ಗಮನಿಸಿ ಮಧ್ಯಂತರ ಅರ್ಜಿಯ ಪಟ್ಟಿಯನ್ನು ಗೌರವಾನ್ವಿತ ಸಿಜೆಐ ಅವರು ತೆಗೆದುಕೊಳ್ಳಬಹುದು. ಏಕೆಂದರೆ ಮುಖ್ಯ ವಿಚಾರದಲ್ಲಿ ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದರು.
ಮುಖ್ಯಮಂತ್ರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮುಖ್ಯ ಪೀಠದ ನ್ಯಾಯಾಧಿಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ಕಳೆದ ವಾರ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಏಕೆ ತುರ್ತು ಪಟ್ಟಿಗೆ ಉಲ್ಲೇಖಿಸಲಿಲ್ಲ ಎಂದು ಪೀಠವು ಅಭಿಷೇಕ್ ಸಿ್ವಂಗೆ ಕೇಳಿದೆ.
2024 ರ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಅರವಿಂದ್ ಕೇಜ್ರಿವಾಲ್‌ಗೆ ಮೇ 10 ರಂದು ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿತು. ಆದಾಗ್ಯೂ, ಅವರ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡುವುದನ್ನು ಮತ್ತು ಅಧಿಕೃತ ೈಲ್‌ಗಳಿಗೆ ಸಹಿ ಹಾಕುವುದನ್ನು ಅದು ನಿರ್ಬಂಧಿಸಿದೆ.
ಮುಖ್ಯಮಂತ್ರಿಗಳು ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಮತ್ತು ಈ ಉದ್ದೇಶಕ್ಕಾಗಿ ಜೂನ್ 1 ರಂದು ಕೊನೆಗೊಳ್ಳುವ ಮಧ್ಯಂತರ ಜಾಮೀನನ್ನು ವಿಸ್ತರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.2021-2 ಕ್ಕೆ ದೆಹಲಿ ಸರ್ಕಾರವು ಈಗ ರದ್ದುಗೊಳಿಸಿರುವ ಅಬಕಾರಿ ನೀತಿಯ ರಚನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣವಾಗಿದೆ.