ನವದೆಹಲಿ,ಸೆ.15- ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿರುವುದರಿಂದ ದೆಹಲಿಯ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಕೂಡ ಮುಂದಿನ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಸ್ವತಃ ಕ್ರೇಜಿವಾಲ್ ಸ್ಪಷ್ಟಪಡಿಸಿದ್ದಾರೆ.
ಹಾಗಾದರೆ ರಾಷ್ಟ್ರ ರಾಜಧಾನಿಯ ಮುಂದಿನ ಮುಖ್ಯಮಂತ್ರಿ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ನಾವು ವಿಧಾನಸಭೆಯನ್ನು ವಿಸರ್ಜಿಸುವುದಿಲ್ಲ, ಕೇಂದ್ರ ಸರ್ಕಾರ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಜೊತೆಯಲ್ಲಿ ದೆಹಲಿಗೂ ಚುನಾವಣೆ ನಡೆಸಲಿ ಎಂದು ಹೇಳಿದ್ದಾರೆ.
ಇದೀಗ ಕೇಜ್ರಿವಾಲ್ ರಾಜೀನಾಮೆ ನೀಡಿದರೆ ಅವರ ಸ್ಥಾನಕ್ಕೆ ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಶಾಸಕರು ಆಗಿರುವ ಶಿಕ್ಷಣ, ಲೋಕೋಪಯೋಗಿ, ಇಂಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿರುವ ಅತಿಶಿ ಸಿಂಗ್ ಹೆಸರು ಮುಂಚೂಣಿಯಲ್ಲಿದೆ.
ಕ್ರೇಜಿವಾಲ್ ಮತ್ತು ಮನೀಶ್ ಸಿಸೋಡಿಯ ಬಂಧನಕ್ಕೊಳಪಟ್ಟ ಮೇಲೆ ಅಸ್ಥಿರತೆಯಿಂದ ಕೂಡಿದ್ದ ದೆಹಲಿ ಸರ್ಕಾರವನ್ನು ಅತ್ಯಂತ ಚಾಣಾಕ್ಷತದಿಂದ ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಶಿಕ್ಷಣ ಸಚಿವರಾಗಿ ದೆಹಲಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಖಾಸಗಿಯವರು ನಾಚಿಸುವಂತೆ ಉನ್ನತೀಕರಿಸಿದ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.ವಿದೇಶದಲ್ಲಿ ಉತ್ತಮ ಶಿಕ್ಷಣ ಪಡೆದುಕೊಂಡಿರುವ ಅವರ ಮೇಲೆ ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪಗಳಿಲ್ಲ. ಯಾವುದೇ ವಿಷಯದಲ್ಲೂ ಅತ್ಯಂತ ಎದೆಗಾರಿಕೆಯಿಂದ ಮಾತನಾಡುವ ಕೌಶಲ್ಯ ಹೊಂದಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರ ಸರ್ಕಾರವನ್ನು ಅತ್ಯಂತ ಕಠಿಣ ಪದಗಳಲ್ಲಿ ಟೀಕಿಸುತ್ತಿದ್ದ ಕೆಲವೇ ಕೆಲವು ಪ್ರಮುಖರಲ್ಲಿ ಇವರು ಕೂಡ ಒಬ್ಬರು. ಸಹಜವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ಸಿಂಗ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.