Friday, October 11, 2024
Homeರಾಜ್ಯಸಿಎಂ ಸೇರಿದಂತೆ ಗಣ್ಯರಿದ್ದ ವೇದಿಕೆಯತ್ತ ನುಗ್ಗಿ ಬಂದ ಅಪರಿಚಿತ, ಕೆಲಕಾಲ ಆತಂಕ

ಸಿಎಂ ಸೇರಿದಂತೆ ಗಣ್ಯರಿದ್ದ ವೇದಿಕೆಯತ್ತ ನುಗ್ಗಿ ಬಂದ ಅಪರಿಚಿತ, ಕೆಲಕಾಲ ಆತಂಕ

Security Breach

ಬೆಂಗಳೂರು,ಸೆ.15- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಅಪರಚಿತನೊಬ್ಬ ಬ್ಯಾರಿಕೇಡ್‌ ಹಾರಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿದ್ದ ವೇದಿಕೆಯತ್ತ ನುಗ್ಗಿದ್ದು, ಭಾರಿ ಆತಂಕ ಮೂಡಿಸಿದ್ದು, ಭದ್ರತಾ ವ್ಯವಸ್ಥೆಗೆ ಸವಾಲೊಡ್ಡಿತ್ತು.

ವಿಧಾನಸೌಧದ ಪೂರ್ವದ್ವಾರದಲ್ಲಿನ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮಕ್ಕಾಗಿ ಬೃಹತ್‌ ವೇದಿಕೆಯನ್ನು ನಿರ್ಮಿಸಲಾಗಿತ್ತು. ಸಾಕಷ್ಟು ಭದ್ರತೆಯನ್ನು ಆಯೋಜಿಸಲಾಗಿತ್ತು. ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಭಾಷಣ ಮಾಡುತ್ತಿದ್ದರು. ಈ ವೇಳೆ ಆಕಾಶನೀಲಿ ಅಂಗಿ ಹಾಗೂ ಕಾಖಿ ಬಣ್ಣದ ಪ್ಯಾಂಟ್‌ ಧರಿಸಿದ್ದ ವ್ಯಕ್ತಿಯೊಬ್ಬ ಕನ್ನಡದ ಶಾಲು ಧರಿಸಿಕೊಂಡಿದ್ದು, ಸಾರ್ವಜನಿಕರ ಗ್ಯಾಲರಿಯಿಂದ ಏಕಾಏಕಿ ವೇದಿಕೆಯತ್ತ ನುಗ್ಗಿದ್ದಲ್ಲದೆ, ಎತ್ತರದ ವೇದಿಕೆ ಏರಲು ನೆಗೆದಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡು ಅಂಗರಕ್ಷಕರು ವೇದಿಕೆ ಯಲ್ಲಿದ್ದ ಗಣ್ಯರ ಬಳಿ ಬರಲು ಸಾಧ್ಯವಾಗದಂತೆ ಅಪರಿಚಿತ ವ್ಯಕ್ತಿಯನ್ನು ಆರಂಭದಲ್ಲೇ ನಿರ್ಬಂಧಿಸಿದ್ದಾರೆ.

ಈ ಹಂತದಲ್ಲಿ ವ್ಯಕ್ತಿ ತನ್ನ ಕೈಯಲ್ಲಿದ್ದ ಶಾಲನ್ನು ಮುಖ್ಯಮಂತ್ರಿ ಸಿದ್ದರಾಮಯ, ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರುಗಳಾದ ಪ್ರಿಯಾಂಕ್‌ ಖರ್ಗೆ, ಕೆ.ಜೆ.ಜಾರ್ಜ್‌, ದಿನೇಶ್‌ ಗುಂಡೂರಾವ್‌ ಅವರುಗಳ ಕಡೆಗೆ ಎಸೆದಿದ್ದಾನೆ. ಅದನ್ನು ವೇದಿಕೆಯಲ್ಲಿದ್ದ ಕೆಲವು ಅಧಿಕಾರಿಗಳು ತಡೆದಿದ್ದಾರೆ.

ಏಕಾಏಕಿ ಅಪರಿಚಿತ ವ್ಯಕ್ತಿ ನುಗ್ಗಿಬಂದಿದ್ದು, ಒಂದು ಕ್ಷಣ ಆಘಾತಕಾರಿಯಾಗಿ ಗಲಿಬಿಲಿ ಮೂಡಿಸಿದೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆಯಲ್ಲಿ ಯಾವುದೋ ಕಾಗದಪತ್ರವನ್ನು ಗಮನಿಸುತ್ತಿದ್ದರು. ಹೀಗಾಗಿ ಅವರು ವೇದಿಕೆಯತ್ತ ನುಗ್ಗಿಬಂದ ವ್ಯಕ್ತಿಯನ್ನು ಗುರುತಿಸಲು ಸಮಯ ಬೇಕಾಯಿತು. ಉಳಿದಂತೆ ಕೆಲವರು ಆತಂಕದಿಂದ ದಿಢೀರನೇ ಮೇಲೆ ಎದ್ದು ನಿಂತಿದ್ದರು.

ಪೊಲೀಸರು ಅಪರಿಚಿತ ವ್ಯಕ್ತಿಯನ್ನು ಹಿಡಿದು ಎಳೆದೊಯ್ದರು. ತಕ್ಷಣವೇ ಪೊಲೀಸರು ಅಪರಿಚಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪರಿಚಿತನ ಕೈಯಲ್ಲಿ ಶಾಲು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳೂ ಕಂಡುಬರಲಿಲ್ಲ. ವ್ಯಕ್ತಿಯ ಹೆಸರಿದ್ದ ಶಾಲನ್ನು ಸಿಬ್ಬಂದಿಗಳು ತೆಗೆದು ಸಿದ್ದರಾಮಯ್ಯ ಅವರ ಮುಂದೆಯೇ ಇಟ್ಟಿದ್ದರು. ನಂತರ ಅದನ್ನು ಗನ್‌ಮ್ಯಾನ್‌ಗಳು ಪಕ್ಕಕ್ಕೆ ಎತ್ತಿಟ್ಟರು.

ಅಪರಿಚಿತ ವ್ಯಕ್ತಿಯನ್ನು ಎಳೆದೊಯ್ಯುವಾಗ ಆತ ಧರಿಸಿದ್ದ ಶಾಲು ಕೂಡ ಬಿದ್ದುಹೋಯಿತು. ಒಂದು ಕ್ಷಣ ಈ ಘಟನೆ ಎಲ್ಲರನ್ನೂ ದಿಗೂಢರನ್ನಾಗಿ ಮಾಡಿತು.ಉತ್ಕೃಷ್ಟವಾದ ಭದ್ರತಾ ವಲಯವಾಗಿರುವ ವಿಧಾನಸೌಧ ಮುಂಭಾಗದಲ್ಲಿಯೇ ಈ ರೀತಿಯ ಘಟನೆ ನಡೆದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ಅಪರಿಚಿತನನ್ನು ವಶಕ್ಕೆ ಪಡೆದ ಬಳಿಕ ಕಾರ್ಯಕ್ರಮ ಎಂದಿನಂತೆ ಮುಂದುವರೆದಿದ್ದು, ಯಾವುದೇ ವಿಚಲಿತ ವಾತಾವರಣ ಕಂಡುಬರಲಿಲ್ಲ.

RELATED ARTICLES

Latest News