Friday, October 11, 2024
Homeರಾಜ್ಯಬಿಜೆಪಿ ಶಾಸಕ ಮುನಿರತ್ನ ಎರಡು ದಿನ ಪೊಲೀಸ್‌‍ ಕಸ್ಟಡಿಗೆ

ಬಿಜೆಪಿ ಶಾಸಕ ಮುನಿರತ್ನ ಎರಡು ದಿನ ಪೊಲೀಸ್‌‍ ಕಸ್ಟಡಿಗೆ

BJP MLA Muniratna in police custody for two days

ಬೆಂಗಳೂರು,ಸೆ.15– ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ವೈಯಾಲಿಕಾವಲ್‌ ಠಾಣೆ ಪೊಲೀಸರು ಬಂಧಿಸಿರುವ ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್‌‍ ಕಸ್ಟಡಿಗೆ ನೀಡಿದ್ದಾರೆ.

ಮಾಜಿ ಕಾರ್ಪೋರೇಟರ್‌ ವೇಲು ನಾಯ್ಕರ್‌ ಅವರು ನೀಡಿರುವ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದರು. ವೈಯಾಲಿಕಾವಲ್‌ ಠಾಣೆಯಲ್ಲಿ ಅವರ ವಿರುದ್ಧ ಎರಡು ಪ್ರಕರಣಗಳು ದಾಖಲಾಗುತ್ತಿದ್ದಂತೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದರು. ಅವರ ಬೆನ್ನು ಹತ್ತಿದ ಪೊಲೀಸರು ಅವರ ಮೊಬೈಲ್‌ ಲೊಕೇಶನ್‌ ಆಧರಿಸಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಬಳಿ ಅವರನ್ನು ವಶಕ್ಕೆ ತೆಗೆದುಕೊಂಡರು.

ನಂತರ ಅವರನ್ನು ಬೆಂಗಳೂರಿಗೆ ಕರೆತಂದು ಬಂಧಿಸಿ ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೊಳಪಡಿಸಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಒಂದು ವಾರ ಕಾಲ ಪೊಲೀಸ್‌‍ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಆಗ ವಿಚಾರಣೆ ನಡೆಸಿದ ನ್ಯಾಯಾಧೀಶರು ಎರಡು ದಿನಗಳ ಕಾಲ ಅವರನ್ನು ಪೊಲೀಸ್‌‍ ಕಸ್ಟಡಿಗೆ ನೀಡಿದರು.

ಜಾತಿ ನಿಂದನೆ ಮಾಡಿರುವುದಾಗಿ ಬಿಬಿಎಂಪಿಯ ಮಾಜಿ ಸದಸ್ಯ ವೇಲು ನಾಯ್ಕರ್‌ ಅವರು ವೈಯಾಲಿಕಾವಲ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ 30 ಲಕ್ಷ ರೂ. ಕಮೀಷನ್‌ ಕೊಡುವಂತೆ ಒತ್ತಾಯಿಸಿ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರು ಸಹ ವೈಯಾಲಿಕಾವಲ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣದಲ್ಲಿ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

RELATED ARTICLES

Latest News