ಬೆಂಗಳೂರು, ಫೆ.23- ಅಸ್ಸಾಂನಿಂದ ನಗರಕ್ಕೆ ರೈಲಿನಲ್ಲಿ ಬಂದು ಮಾರ್ವಾಡಿ ಮನೆಗಳಲ್ಲೇ ಕಳ್ಳತನ ಮಾಡಿ ವಾಪಸ್ ತನ್ನ ಊರಿಗೆ ಪರಾರಿಯಾಗುತ್ತಿದ್ದ ಅಸ್ಸಾಂ ಕಳ್ಳನನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಪತ್ತೆಹಚ್ಚಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಯು ನಗರದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಅಸ್ಸಾಂನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಿಂದ ಕಾರು ಹಾಗೂ ಬಟ್ಟೆಗಳನ್ನು ಖರೀದಿಸಿ ವಿಲಾಸಿ ಜೀವನ ನಡೆಸುತ್ತಿದ್ದನು.
ನಗರದಲ್ಲಿನ ಮಾರ್ವಾಡಿ ಮನೆಗಳೇ ಈತ ಟಾರ್ಗೇಟ್. ಅಸ್ಸಾಂನಿಂದ ನಗರಕ್ಕೆ ರೈಲಿನಲ್ಲಿ ಬಂದು ಮೆಜೆಸ್ಟಿಕ್‍ನ ಲಾಡ್ಜ್‍ನಲ್ಲಿ ರೂಂ ಮಾಡಿ ರಾತ್ರಿ ಉಳಿದುಕೊಂಡು ಬೆಳಗಾಗುತ್ತಿದ್ದಂತೆ ಬೈಕ್‍ನಲ್ಲಿ ಸುತ್ತಾಡುತ್ತ ಬೀಗ ಹಾಕಿರುವ ಮಾರ್ವಾಡಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದನು. ಇತ್ತೀಚೆಗೆ ಶೇಷಾದ್ರಿಪುರಂನ ಮಾರ್ವಾಡಿ ಒಬ್ಬರ ಮನೆಯ ಕಿಟಕಿ ಮುರಿದು ಒಳನುಗ್ಗಿ ಸುಮಾರು 2.1 ಕೆಜಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಅಸ್ಸಾಂಗೆ ಪರಾರಿಯಾಗಿದ್ದನು.
ಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು: ವಾಹನಗಳು ಬೆಂಕಿಗಾಹುತಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸುಮಾರು 250ಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಪರಿಶೀಲಿಸಿ ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿ ಅಸ್ಸಾಂಗೆ ಹೋಗಿ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ. ಈ ಆರೋಪಿ ಈ ಮಾರ್ವಾಡಿ ಮನೆ ಕಳ್ಳತನ ಮಾಡುವ ಮೊದಲು ಅಂದೇ ಸದಾಶಿವನಗರದ ಮನೆಯಲ್ಲಿ ಕಳ್ಳತನ ಮಾಡಲು ನುಗ್ಗಿದ್ದಾಗ ಅಲ್ಲಿ ಏನೂ ಸಿಕ್ಕಿರಲಿಲ್ಲ.
ಇದೀಗ ಶೇಷಾದ್ರಿಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದಿರುವ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.